ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ 4ನೇ ಟೆಸ್ಟ್‌ನಲ್ಲಿ ಆಸಿಸ್ ಬ್ಯಾಟರ್ ಜೊತೆ ವಿರಾಟ್ ಕೊಹ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಕೊಹ್ಲಿ ಅವರು ಬೇಕಂತಲೇ ಕಿರಿಕ್ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ.
ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರಿಗೆ ಭುಜದಿಂದ ಡಿಕ್ಕಿ ಹೊಡೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ದಂಡನೆಗೊಳಗಾಗಿದ್ದಾರೆ. ಐಸಿಸಿ ನಿಯಮ ಉಲ್ಲಂಘನೆ ಮಾಡಿರುವ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ. ಹಾಗೆಯೇ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕು ಡಿಮೆರಿಟ್ ಪಾಯಿಂಟ್‌ಗೆ ಒಳಗಾದರೆ ಕನಿಷ್ಠ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ 4ನೇ ಟೆಸ್ಟ್ ಪಂದ್ಯ ಆರಂಭವಾಗಿತ್ತು. ಆಸ್ಟ್ರೇಲಿಯಾ ತಂಡದ ಹೊಸ ಆಟಗಾರ ಸ್ಯಾಮ್ ಕೊನ್‌ಸ್ಟಸ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಸ್ಕ್ರೀಜ್‌ಗೆ ಇಳಿದಿದ್ದರು. ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದರು.
10ನೇ ಓವರ್‌ನ ಅಂತ್ಯದಲ್ಲಿ ಕೊನ್‌ಸ್ಟಸ್ ಹೋಗುತ್ತಿದ್ದ ಸ್ಥಳಕ್ಕೆ ಬೇಕಂತಲೇ ಬಂದ ಕೊಹ್ಲಿ ಅವರು ಕೊನ್‌ಸ್ಟಸ್ ಭುಜಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಕೊನ್‌ಸ್ಟಸ್ ಯಾವುದೇ ಪ್ರತಿಕ್ರಿಯೆ ನೀಡದೆ, ಫೀಲ್ಡ್ ನಲ್ಲಿ ಬ್ಯಾಟಿಂಗ್‌ನಿಂದಲೇ ಉತ್ತರಿಸುತ್ತೇನೆಂದು ಹೋಗಿದ್ದಾರೆ. ಕೊನ್‌ಸ್ಟಸ್ ಕೇವಲ 52 ಎಸೆತಗಳಿಗೆ ಅರ್ಧಶತಕ ಬಾರಿಸಿದ್ದು, 62 ಬಾಲ್‌ಗಳಿಗೆ 60 ರನ್ ಗಳಿಸಿ ಔಟಾಗಿದ್ದಾರೆ.
"Have a look where Virat walks. Virat's walked one whole pitch over to his right and instigated that confrontation. No doubt in my mind whatsoever."
— 7Cricket (@7Cricket) December 26, 2024
– Ricky Ponting #AUSvIND pic.twitter.com/zm4rjG4X9A
ಕೊನ್‌ಸ್ಟಸ್‌ಗೆ ಕೊಹ್ಲಿ ಡಿಕ್ಕಿ ಹೊಡೆದ ಸಮಯದಲ್ಲಿ ಜಗಳವಾಗದಂತೆ ಅಂಪೈರ್ ಮತ್ತು ಇತರ ಆಟಗಾರರು ಮಧ್ಯ ಪ್ರವೇಶಿಸಿ, ಇಬ್ಬರನ್ನೂ ಸುಮ್ಮನಾಗಿಸಿದ್ದಾರೆ. ಘಟನೆಯನ್ನು ಪರಿಶೀಲಿಸಲು ಐಸಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕೊನ್‌ಸ್ಟಸ್ ಅವರನ್ನು ಮ್ಯಾಚ್ ರೆಫರಿ ವಿಚಾರಣೆಗೆ ಕರೆಯಬಹುದು ಎಂದು ಹೇಳಲಾಗಿದೆ.

ಇತ್ತೀಚೆಗೆ, ಅಡಿಲೇಡ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಟ್ರಾವಿಸ್ ಹೆಡ್ ಜೊತೆ ಮೊಹಮ್ಮದ್ ಸಿರಾಜ್ ಕಿರಿಕ್ ಮಾಡಿಕೊಂಡಿದ್ದರು. ಅವರಿಗೆ ಡಿಮೆರಿಟ್ ಪಾಯಿಂಟ್ ನೀಡಿ, ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಲಾಗಿತ್ತು. ಅದೇ ರೀತಿ ವಿರಾಟ್ ಕೊಹ್ಲಿಗೂ ದಂಡ ವಿಧಿಸಲಾಗಿದೆ.