ಐಪಿಎಲ್ 2025ರ 46ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ.
ಪ್ರಸ್ತುತ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ ತಂಡ 12 ಪಾಯಿಂಟ್ಸ್ನೊಂದಿಗೆ ತೃತೀಯ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವಣ ಈ ಪಂದ್ಯದಲ್ಲಿ ಗೆಲ್ಲುವ ತಂಡ 14 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ.
ಇಂದಿನ ಪಂದ್ಯದಲ್ಲಿ ಜಯಗಳಿಸುವ ತಂಡವು ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಒಟ್ಟು 14 ಅಂಕಗಳನ್ನು ಪಡೆಯಬಹುದು. ಅಲ್ಲದೆ ಮುಂದಿನ 4 ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ 16 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಬಹುದು. ಹೀಗಾಗಿ ಇಂದಿನ ಮ್ಯಾಚ್ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪಾಲಿಗೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಕಳೆದ ಪಂದ್ಯದಲ್ಲಿ ರಾಯಲ್ ಪಡೆ ವಿರುದ್ಧ ಪಾರುಪತ್ಯ ಮೆರೆಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಡೆಲ್ಲಿ ತಂಡದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಉಭಯ ತಂಡಗಳು ಇಲ್ಲಿಯವರೆಗೆ 32 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19 ಬಾರಿ ಗೆಲುವು ದಾಖಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 12 ಸಲ ಗೆಲುವು ದಾಖಲಿಸಿದೆ. ಒಂದು ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು.
ಕೊಹ್ಲಿಯತ್ತ ಎಲ್ಲರ ಚಿತ್ತ
ಬೆಂಗಳೂರಿನಲ್ಲಿ ಏಪ್ರಿಲ್ 10ರಂದು ನಡೆದಿದ್ದ 24ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಮೋಘ ಬ್ಯಾಟಿಂಗ್ ನಡೆಸಿದ್ದ ಕೆ ಎಲ್ ರಾಹುಲ್ ಜಯದಲ್ಲಿ ಮಿಂಚಿದ್ದರು. ಪಂದ್ಯ ಗೆದ್ದ ನಂತರ ಕಾಂತಾರ ಸಿನಿಮಾ ರೀತಿ ಸಂಭ್ರಮಿಸಿದ್ದ ರಾಹುಲ್ ಇದು ನನ್ನ ಅಂಗಳ ಎಂದು ಸಾರಿ ಹೇಳಿದ್ದರು. ಇದೀಗ ಪಂದ್ಯ ನಡೆದು ಇಂದಿಗೆ 17 ದಿನಗಳು ಕಳೆದಿವೆ. ಇಂದು ರಂದು ರಾಹುಲ್ ಸಂಭ್ರಮಕ್ಕೆ ಉತ್ತರವಾಗಿ ವಿರಾಟ್ ಯಾವ ರೀತಿ ಪ್ರತ್ಯುತ್ತರ ನೀಡುತ್ತಾರೆ ಎಂಬುದನ್ನು ಎಲ್ಲರಲ್ಲೂ ಕುತೂಹಲ ಮೂಡಿದೆ. ಇಂದಿನ ಪಂದ್ಯ ಡೆಲ್ಲಿಯಲ್ಲಿ ನಡೆಯಲಿದ್ದು ದೆಹಲಿ ಕ್ರೀಡಾಂಗಣ ವಿರಾಟ್ ಕೊಹ್ಲಿಯವರ ತವರು ಅಂಗಳವಾಗಿದೆ.
ಈ ಸುದ್ದಿ ಓದಿದ್ದೀರಾ? ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಿದ ‘ಕ್ರಿಕೆಟ್’; ಮತ್ತೆ ತನ್ನ ಸಾಮರ್ಥ್ಯ ತೋರಿಸಿದ ಕನ್ನಡಿಗ
ಏಪ್ರಿಲ್ 10 ರಂದು ಬೆಂಗಳೂರಿನ ಎಂ ಚಿನಸ್ವಾಮಿ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ರಾಹುಲ್ ಅಜೇಯ 93 ರನ್‌ಗಳ ಇನಿಂಗ್ಸ್ ಕಟ್ಟಿ ತಂಡದ ಜಯದಲ್ಲಿ ಮಿಂಚಿದ್ದರು. ಈಗ ತನ್ನ ತವರಿನ ಅಂಗಳದಲ್ಲಿ ಮಿಂಚುವುದು ವಿರಾಟ್ ಕೊಹ್ಲಿ ಸರದಿಯಾಗಿದೆ.
ಪ್ರಸ್ತುತ ಟೂರ್ನಿಯಲ್ಲಿ323 ರನ್ ಕಲೆಹಾಕಿರುವ ರಾಹುಲ್ ಮತ್ತು 225 ರನ್ ಗಳಿಸಿರುವ ಅಭಿಷೇಕ್ ಪೊರೆಲ್ ಡೆಲ್ಲಿತಂಡದ ಬ್ಯಾಟಿಂಗ್ ಶಕ್ತಿಗಳಲ್ಲಿಪ್ರಮುಖರಾಗಿದ್ದಾರೆ. ಅಂತೆಯೇ 392 ರನ್ ಗಳಿಸಿರುವ ಕೊಹ್ಲಿ, 239 ರನ್ ಗಳಿಸಿರುವ ಫಿಲ್ ಸಾಲ್ಟ್ ಮತ್ತು 230 ರನ್ ಕಲೆಹಾಕಿರುವ ದೇವದತ್ ಪಡಿಕ್ಕಲ್ ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲ ಎನಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿಜೋಶ್ ಹೇಜಲ್‌ವುಡ್ ಮತ್ತು ಕೃಣಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್‌ನ ಅಸ್ತ್ರಗಳಾಗಿದ್ದಾರೆ. ಇವರಿಬ್ಬರು ಕ್ರಮವಾಗಿ 16 ಮತ್ತು 12 ವಿಕೆಟ್ ಪಡೆದು ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ. ಅಂತೆಯೇ ಡೆಲ್ಲಿತಂಡದ ಬೌಲಿಂಗ್ ಆಧಾರವಾಗಿರುವ ಕುಲ್ದೀಪ್ ಯಾದವ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರಮವಾಗಿ 12 ಮತ್ತು 11 ವಿಕೆಟ್ ಪಡೆದಿದ್ದು, ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಭಾನುವಾರದ ಡಬಲ್ ಹೆಡರ್‌ನ ದ್ವಿತೀಯ ಪಂದ್ಯ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಉಭಯ ತಂಡಗಳ ಸಂಭಾವ್ಯ 11ರ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ , ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್ , ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಫಾಫ್ ಡು ಪ್ಲೆಸಿಸ್, ಕರುಣ್ ನಾಯರ್ , ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್ , ದುಷ್ಮಂತ ಚಮೀರಾ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ ಸ್ಟಾರ್