ಪ್ಯಾರಿಸ್ ಒಲಿಂಪಿಕ್ಸ್ 2024 ರ ನಾಲ್ಕನೇ ದಿನದಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರ ಜೋಡಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಜಯವನ್ನು ತಮ್ಮದಾಗಿಸಿಕೊಂಡರು.
ಭಾನುವಾರ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ತಾವು ಕಂಚು ಜಯಿಸಿದ್ದ ಮನು ಭಾಕರ್ ಶೂಟಿಂಗ್ ರೇಂಜ್‌ನಲ್ಲಿ ಮತ್ತೊಂದು ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಭಾರತದ ಜೋಡಿಯು ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ಅವರನ್ನು ಸೋಲಿಸಿದೆ. ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024 | ಭಾರತಕ್ಕೆ ಮೊದಲ ಪದಕ; 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್
ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು ಅಮೋಘ ಸಾಮರ್ಥ್ಯ ಮೆರೆದರು. ತಮ್ಮ ಆರಂಭಿಕ 10 ಶಾಟ್‌ಗಳಲ್ಲಿ ಅವರು ಎಂಟು ಬಾರಿ 10 ಮತ್ತು ಎರಡು 9ರ ಸ್ಕೋರ್ ಮಾಡಿದ್ದರು. ಎರಡನೇಯ ಸುತ್ತಿನಲ್ಲಿಯೂ ಇದನ್ನೂ ಪುನರಾವರ್ತಿಸಿದರು. ಆದರೆ ಅಂತಿಮ ಸುತ್ತಿನಲ್ಲಿ ತುಸು ಅಂಕ ಕಳೆದುಕೊಂಡರು. ಅದರಿಂದಾಗಿ ಐದು ಸಲ 10 ಮತ್ತು 9ರ ಅಂಕಗಳನ್ನು ಗಳಿಸಿದರು.
ಉತ್ತಮ ಆರಂಭ ಕಾಣದ ಸರಬ್ಜೋತ್ ಸಿಂಗ್ ಅವರಿಗೆ ಮನು ಉತ್ತಮ ಬೆಂಬಲ ನೀಡಿದರು. ಆರಂಭಿಕ ಸುತ್ತಿನಲ್ಲಿ ಐದು ಬಾರಿ 9 ಮತ್ತು 10 ಸ್ಕೋರ್ ಮಾಡಿದರು. ಎರಡನೇ ಸುತ್ತಿನಲ್ಲಿ ಸತತ ಏಳು ಬಾರಿ 10 ಅಂಕ ಗಳಿಸಿದರು. ಉಳಿದಂತೆ 9 ಮತ್ತು 8 ಅಂಕ ಪಡೆದರು. ಅದರೆ ಅಂತಿಮ ಸುತ್ತಿನಲ್ಲಿ ಇಬ್ಬರು ಮಿಂಚಿದರು. ಏಳು ಬಾರಿ 10 ಮತ್ತು ಮೂರು ಸಲ 9 ಅಂಕಗಳನ್ನು ಕಲೆಹಾಕಿದ್ದರು.
ಒಂದೇ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ 2 ಪದಕ ಗೆದ್ದಿರುವ ಮನು ಭಾಕರ್ ಇತಿಹಾಸ ನಿರ್ಮಿಸಿದ್ದಾರೆ. ಹರಿಯಾಣದ ಜಜ್ಜಾರ್‌ನವರಾದ ಮನು ಭಾಕರ್ ಈ ಮೊದಲು ವಿಶ್ವಕಪ್‌ನಲ್ಲಿ 9 ಚಿನ್ನ, 2 ಬೆಳ್ಳಿ, ಯುವ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತಕ್ಕೆ ಶೂಟಿಂಗ್ ವಿಭಾಗದಲ್ಲಿ ಈ ಮೊದಲು ರಾಜ್ಯವರ್ಧನ್ ಸಿಂಗ್ ರಾಥೋರ್(ಬೆಳ್ಳಿ , 2004ರ ಅಥೆನ್ಸ್ ಒಲಿಂಪಿಕ್ಸ್), ಅಭಿನವ್ ಬಿಂದ್ರ(ಚಿನ್ನ, 2008ರ ಬೀಜಿಂಗ್ ಒಲಿಂಪಿಕ್ಸ್), ವಿಜಯ್ ಕುಮಾರ್(ಬೆಳ್ಳಿ, 2012ರ ಲಂಡನ್ ಒಲಿಂಪಿಕ್ಸ್ ) ಹಾಗೂ ಗಗನ್ ನರಾಂಗ್(ಕಂಚು, 2012ರ ಲಂಡನ್ ಒಲಿಂಪಿಕ್ಸ್) ಪದಕ ಗೆದ್ದಿದ್ದರು.