ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಬಿಟ್ಟರೆ ವೇಗದ ಬೌಲಿಂಗ್‌ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸುವಂತ ಬೌಲರ್‌ಗಳು ಯಾರಿಲ್ಲ ಎಂಬ ಮಾತು ಈಗ ಕೊನೆಗೊಂಡಿದೆ. ಟೀಂ ಇಂಡಿಯಾಗೆ ಮಯಂಕ್ ಯಾದವ್ ಎಂಬ ಹೊಸ ಅಸ್ತ್ರವೊಂದು ದೊರಕಿದೆ. ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮೊದಲ ಎರಡು ಪಂದ್ಯಗಳಲ್ಲೇ ತಮ್ಮ ಸಾಮರ್ಥ್ಯ ತೋರಿರುವ ನವದೆಹಲಿಯ 21 ವರ್ಷದ ಮಯಂಕ್ ಯಾದವ್ ಭವಿಷ್ಯದಲ್ಲಿ ಭಾರತ ತಂಡದ ವೇಗದ ಬೌಲಿಂಗ್‌ನ ಪ್ರಮುಖ ಅಸ್ತ್ರವಾಗುವುದರಲ್ಲಿ ಅನುಮಾನವೇ ಇಲ್ಲ.
ಮಾರ್ಚ್ 30 ರಂದು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಮಯಂಕ್ ಯಾದವ್ ತಮ್ಮ ಲಖನೌ ಸೂಪರ್ ಜಯಂಟ್ಸ್ ತಂಡದ ಪರವಾಗಿ 155.8 ಕಿ.ಮೀ ವೇಗದ ಬೌಲಿಂಗ್ ಮಾಡುವುದರೊಂದಿಗೆ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದರು. ಮೊದಲ ಪಂದ್ಯದಲ್ಲಿಯೇ ಪಂಜಾಬ್ ತಂಡದ ಮೂವರು ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡಿದ ಮಯಂಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಲಖನೌ ನೀಡಿದ 199 ಸವಾಲನ್ನು ಬೆನ್ನಟ್ಟಿದ ಪಂಜಾಬ್ ಗೆಲುವಿನ ಸಮೀಪ ಬಂದರೂ ಮಯಂಕ್ ಯಾದವ್ ಅವರ ಅದ್ಭುತ ಬೌಲಿಂಗ್‌ನಿಂದಾಗಿ 178 ರನ್ ಗಳಿಸಲಷ್ಟೇ ಸಾಧ್ಯವಾಗಿ 21 ರನ್‌ಗಳಿಂದ ಸೋಲು ಅನುಭವಿಸಿತು.
ತಮ್ಮ ಎರಡನೇ ಪಂದ್ಯ ಏ.2ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಮಯಂಕ್ ಯಾದವ್ ಅವರ ಬೌಲಿಂಗ್ ಕರಾಮತ್ತು ಮುಂದುವರಿದಿತ್ತು. 156.7 ಕಿ.ಮೀ ವೇಗದ ಬೌಲಿಂಗ್ ಮಾಡುವುದರೊಂದಿಗೆ ಹಿಂದಿನ ಪಂದ್ಯದಲ್ಲಿ ಮಾಡಿದ ತಮ್ಮದೆ 155.8 ಕಿ.ಮೀ ವೇಗದ ಬೌಲಿಂಗ್ ದಾಖಲೆಯನ್ನು ಸರಿಗಟ್ಟಿದರು. ಲಖನೌ ನೀಡಿದ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಬ್ಯಾಟರ್‌ಗಳು ಆರಂಭದಲ್ಲಿ ಉತ್ತಮವಾಗಿ ಆಡುತ್ತಿದ್ದರು. ತಮ್ಮ ಕರಾರುವಾಕ್ ಬೌಲಿಂಗ್ ಮುಂದುವರೆಸಿದ ಮಯಂಕ್ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೂನ್ ಗ್ರೀನ್ ವಿಕೆಟ್‌ಗಳನ್ನು ಕಬಳಿಸಿ ಆರ್‌ಸಿಬಿ ಜಯವನ್ನು ಕಸಿದುಕೊಂಡರು. ಈ ಪಂದ್ಯದಲ್ಲಿಯೂ ಮಯಂಕ್ 14 ರನ್‌ಗಳಿಗೆ 3 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.
ಈ ಸುದ್ದಿ ಓದಿದ್ದೀರಾ? ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್‌ಗೆ 12 ಲಕ್ಷ ರೂ. ದಂಡ
ಇನ್ನೊಂದು ಮುಖ್ಯವಾದ ವಿಷಯವೆಂದರೆ ಅತಿ ವೇಗವಾಗಿ ಬೌಲಿಂಗ್ ಮಾಡುತ್ತಿರುವ ಮಯಂಕ್ ಎರಡು ಪಂದ್ಯಗಳಲ್ಲಿಯೂ 155 ಕಿ.ಮೀ ಬೌಲಿಂಗ್ ಎಸೆಯುತ್ತಿದ್ದಾರೆ. ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್, ನಂತರದಲ್ಲಿ ಜಾವಗಲ್ ಶ್ರೀನಾಥ್, ಜಾಹೀರ್ ಖಾನ್, ಅಜಿತ್ ಅಗರ್ಕರ್, ಅಶೀಶ್ ನೆಹ್ರಾ, ವೆಂಕಟೇಶ್ ಪ್ರಸಾದ್, ಇರ್ಫಾನ್ ಪಠಾಣ್ ವೇಗದ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯರು. ಸದ್ಯ ಟೀಂ ಇಂಡಿಯಾ ವೇಗಿಗಳಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮದ್ ಶಮಿ ತಮ್ಮ ಸ್ಥಾನ ತುಂಬಿದ್ದಾರೆ. ಮಯಂಕ್ ಯಾದವ್ ಅವರ ಮೊದಲ ಎರಡು ಪಂದ್ಯಗಳನ್ನು ಗಮನಿಸಿರುವ ವಿಶ್ವ ಕ್ರಿಕೆಟ್ ದಿಗ್ಗಜರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲಿಂಗ್‌ನಲ್ಲಿ ಈತ ಅದ್ಭುತ ಪ್ರತಿಭೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜೂನ್ 17, 2002ರಂದು ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಮಯಂಕ್ ಯಾದವ್, ಪೋಷಕರು ಶ್ರೀಮಂತ ಹಿನ್ನೆಲೆಯನ್ನು ಹೊಂದಿಲ್ಲ. ಯಾವುದೇ ಪ್ರಭಾವ ಹಾಗೂ ಹಣ ಬಲ ಇಲ್ಲದ ಕಾರಣ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಸೇರಲು ಸಾಧ್ಯವಾಗದೆ ಸಾಧಾರಣವಾದ ಸೊನೇಟ್ ಕ್ಲಬ್ ಸೇರಿಕೊಂಡರು. ಅಲ್ಲಿ ಮಯಂಕ್‌ನ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿದವರು ತಾರಕ್ ಸಿನ್ಹಾ ಹಾಗೂ ದೇವೇಂದ್ರ ಯಾದವ್ ಎಂಬ ಕೋಚ್‌ಗಳು. ಇವರಿಬ್ಬರ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್‌ನ ಹಲವು ಪಟ್ಟುಗಳನ್ನು ಮಯಂಕ್ ಯಾದವ್ ಅಳವಡಿಸಿಕೊಂಡರು.
ಅಕ್ಟೋಬರ್ 11, 2022ರಲ್ಲಿ ದೆಹಲಿ ಪರವಾಗಿ ಮಣಿಪುರದ ವಿರುದ್ಧ ದೇಶೀಯ ಟಿ20 ಆಡುವುದರೊಂದಿಗೆ ವೃತ್ತಿಪರ ಕ್ರಿಕೆಟ್‌ಗೆ ಮಯಂಕ್ ಯಾದವ್ ಕಾಲಿಟ್ಟರು. ದೇಶೀಯ ಕ್ರಿಕೆಟ್ ಏಕದಿನ ಪಂದ್ಯವಾಡಿದ್ದು ಅದೇ ವರ್ಷ ಡಿಸೆಂಬರ್‌ನಲ್ಲಿ ಹರಿಯಾಣ ವಿರುದ್ಧ. ಮಯಂಕ್ ಇಲ್ಲಿಯವರೆಗೂ ಒಂದು ಪ್ರಥಮ ದರ್ಜೆ, 17 ದೇಶೀಯ ಏಕದಿನ ಹಾಗೂ 11 ಟಿ20 ಪಂದ್ಯಗಳನ್ನಾಡಿದ್ದಾರೆ. 2023ರ ವರ್ಷದಲ್ಲಿ ಲಖನೌ ತಂಡ 20 ಲಕ್ಷ ರೂ. ಕೊಟ್ಟು ಐಪಿಎಲ್ ಕ್ರಿಕೆಟ್‌ಗೆ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಹಿಂದಿನ ಐಪಿಎಲ್ ಋತುವಿನಲ್ಲಿ ಒಂದೂ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಈಗ ಆಡಿದ ಮೊದಲ ಎರಡು ಪಂದ್ಯಗಳಲ್ಲಿಯೇ ತಮ್ಮ ಪ್ರತಿಭೆಯನ್ನು 6.1 ಇಂಚಿನ ಯುವಕ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ.
ರಾಹುಲ್, ಫಾಫ್ ಡು ಪ್ಲೆಸಿಸ್ ಮೆಚ್ಚುಗೆ
”ಮಯಂಕ್ ಎಸೆತ ಒಂದು ಚೆಂಡು ನನಗೆ ತುಂಬಾ ಬಲವಾಗಿ ತಟ್ಟಿತ್ತು, ಕಳೆದೆರಡು ಪಂದ್ಯಗಳಲ್ಲಿ ಮಯಂಕ್ ಬೌಲಿಂಗ್ ರೀತಿ ನೋಡಿ ತುಂಬಾ ಸಂತಸ ತಂದಿದೆ. ದುರದೃಷ್ಟವಶಾತ್ ಹಾಗೂ ಗಾಯದಿಂದಾಗಿ ಹೊರಗಿದ್ದ ಮಯಂಕ್ ಕಳೆದ ಎರಡು ಆವೃತ್ತಿಗಳಿಂದ ತಾಳ್ಮೆಯಿಂದ ಡಗ್-ಔಟ್‌ನಲ್ಲಿ ಕಾಯುತ್ತಿದ್ದರು. ಮುಂಬೈನಲ್ಲಿ ಫಿಸಿಯೋಗಳೊಂದಿಗೆ ನಿಜವಾಗಿಯೂ ಶ್ರಮ ವಹಿಸಿದ್ದಾರೆ” ಎಂದು ಲಖನೌ ಸೂಪರ್ ಜಯಂಟ್ಸ್ ನಾಯಕ ಕೆ.ಎಲ್.ರಾಹುಲ್ ಹೇಳಿದರು.
ಸೋಲಿನ ನಂತರ ತಮ್ಮ ಅನಿಸಿಕೆ ಹಂಚಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮಯಂಕ್ ಯಾದವ್ ಅವರನ್ನು ಹಾಡಿ ಹೊಗಳಿದ್ದಾರೆ.
“ಯಾವುದೇ ಹೊಸ ಯುವ ವೇಗದ ಬೌಲರ್ ಅನ್ನು ನೀವು ಮೊದಲು ಸಲ ಎದುರಿಸುವುದು ಸುಲಭವಲ್ಲ. ಅದ್ಭುತ ವೇಗದ ಜೊತೆಗೆ ನಿಯಂತ್ರಣ ಹಾಗೂ ಶಿಸ್ತಿನಿಂದ ಬೌಲಿಂಗ್ ಮಾಡುವ ಮಯಂಕ್ ಸಾಮರ್ಥ್ಯ ಮೆಚ್ಚುವಂತಹದ್ದಾಗಿದೆ. ವೇಗದೊಂದಿಗೆ ನಿಖರತೆಯನ್ನೂ ಹೊಂದಿದ್ದಾರೆ” ಎಂದು ಆರ್‌ಸಿಬಿ ತಂಡದ ನಾಯಕ ಫಾಪ್ ಡು ಪ್ಲೆಸಿಸ್ ಹೇಳಿದರು.
ಭಾರತ ತಂಡ ಸೇರ್ಪಡೆ ನನ್ನ ಮೊದಲ ಕನಸು: ಮಯಂಕ್
ಆಡಿದ ಮೊದಲ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಮಯಂಕ್ ಯಾದವ್ ಭಾರತ ತಂಡಕ್ಕೆ ಸೇರ್ಪಡೆಯಾಗುವುದು ನನ್ನ ಮೊದಲ ಗುರಿ ಎಂದು ಹೇಳಿದ್ದಾರೆ.
”ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 2 ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿರುವುದು ನನ್ನಲ್ಲಿ ಉತ್ತಮ ಭಾವನೆ ಮೂಡಿಸಿದೆ. ನನಗೆ ಇದರಿಂದ ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ. ಭಾರತ ತಂಡದಲ್ಲಿ ಆಡುವುದು ನನ್ನ ಮುಖ್ಯ ಗುರಿಯಾಗಿದೆ. ಇದು ಇನ್ನೂ ಆರಂಭ ಎಂಬ ಭಾವನೆ ನನ್ನಲ್ಲಿ ಮೂಡಿದೆ. ನನಗೆ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದದ್ದು ತುಂಬಾ ಖುಷಿಯಾಗಿದೆ. ನಾನು ವೇಗವಾಗಿ ಬೌಲಿಂಗ್ ಮಾಡುವ ಯಶಸ್ಸಿನ ಹಿಂದೆ ಸಾಕಷ್ಟು ವಿಷಯಗಳು ಅಡಗಿವೆ. ಪಥ್ಯ, ನಿದ್ದೆ, ಸತತ ಪರಿಶ್ರಮ ಕೂಡ ಅದರ ಪ್ರಮುಖ ಭಾಗವಾಗಿದೆ. ಅಲ್ಲದೆ ಗಾಯದ ಸಮಸ್ಯೆಯಿಂದ ಶೀಘ್ರ ಚೇತರಿಸಿಕೊಳ್ಳಲು ಸಾಕಷ್ಟು ಡಯಟ್ ಮಾಡಿದ್ದೆ” ಎಂದು ಮಯಂಕ್ ಯಾದವ್ ತಿಳಿಸಿದ್ದಾರೆ.
𝙎𝙃𝙀𝙀𝙍 𝙋𝘼𝘾𝙀! 🔥🔥
Mayank Yadav with an absolute ripper to dismiss Cameron Green 👏
Head to @JioCinema and @StarSportsIndia to watch the match LIVE#TATAIPL | #RCBvLSG pic.twitter.com/sMDrfmlZim
— IndianPremierLeague (@IPL) April 2, 2024