ಏಕದಿನ ಸರಣಿಗಾಗಿ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ್ದ ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಸೋಲನುಭವಿಸಿದೆ.
ಇಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 203 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಕಾಂಗರೂ ತಂಡ ಕೂಡ ಒಂದು ಹಂತದಲ್ಲಿ 185 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ, ಇದಾದ ನಂತರ ಜೊತೆಯಾದ ಸ್ಟಾರ್ಕ್ ಮತ್ತು ಕಮಿನ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ, ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ವಿರುದ್ಧ ಶರಣಾಯಿತು. ಟೆಸ್ಟ್ ಬಳಿಕ ಏಕದಿನ ಆಡುತ್ತಿರುವ ಅಬ್ದುಲ್ಲಾ ಶಫೀಕ್ ಮತ್ತು ಸೈಮ್ ಅಯೂಬ್ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದ ಅಯೂಬ್ ಮೊದಲ ಓವರ್‌ನಲ್ಲಿಯೇ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರೆ, ಸ್ಟಾರ್ಕ್ ತಮ್ಮ ಮುಂದಿನ ಓವರ್‌ನಲ್ಲಿ ಶಫೀಕ್ ಅವರನ್ನು ಔಟ್ ಮಾಡಿದರು.
ಟೆಸ್ಟ್ ತಂಡದಿಂದ ಹೊರಬಿದ್ದ ನಂತರ ಏಕದಿನ ಸರಣಿಗೆ ಮರಳಿದ ಬಾಬರ್ ಆಜಂ ಬಂದ ತಕ್ಷಣ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿದರು. ಆದರೆ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಎಸೆತದಲ್ಲಿ ಬಾಬರ್ ಕ್ಲೀನ್ ಬೌಲ್ಡ್ ಆದರು.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ: ಗೌತಮ್ ಗಂಭೀರ್ ವಿರುದ್ಧದ ತನಿಖೆಗೆ ನ್ಯಾಯಾಲಯ ಆದೇಶ
ಪಾಕಿಸ್ತಾನದ ನೂತನ ನಾಯಕ ಮೊಹಮ್ಮದ್ ರಿಜ್ವಾನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಇನಿಂಗ್ಸ್ ನಿಭಾಯಿಸಿ 44 ರನ್ ಗಳಿಸಿ ಔಟಾದರು. ಹೀಗಾಗಿ ಪಾಕಿಸ್ತಾನ ಕೇವಲ 117 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಆದರೆ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ ಬೌಲರ್ ನಸೀಮ್ ಶಾ 40 ರನ್ಗಳ ಸ್ಮರಣೀಯ ಇನಿಂಗ್ಸ್ ಆಡಿ ತಂಡವನ್ನು 203 ರನ್‌ಗಳಿಗೆ ಕೊಂಡೊಯ್ದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 3 ಹಾಗೂ ನಾಯಕ ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.
203 ರನ್ಗಳ ಅಲ್ಪ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ನಾಲ್ಕನೇ ಓವರ್‌ನಲ್ಲಿಯೇ ಆರಂಭಿಕರಾದ ಮ್ಯಾಥ್ಯೂ ಶಾರ್ಟ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಜೊತೆಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಉತ್ತಮ ಜೊತೆಯಾಟ ಕಟ್ಟಿದರು. ಇಬ್ಬರೂ ಸೇರಿ ಪಾಕಿಸ್ತಾನದ ವೇಗದ ಬೌಲರ್‌ಗಳ ಮೇಲೆ ದಾಳಿ ನಡೆಸಿ ವೇಗವಾಗಿ ರನ್ ಗಳಿಸಿದರು. ಇವರಿಬ್ಬರ ನಡುವೆ 85 ರನ್ಗಳ ಜೊತೆಯಾಟವಿದ್ದು, ಆಸ್ಟ್ರೇಲಿಯಾ ಗೆಲುವಿಗೆ ಅಡಿಪಾಯ ಹಾಕಿತು.
ಈ ಇಬ್ಬರು ಆಡುವವರೆಗೆ ಆಸ್ಟ್ರೇಲಿಯ ತಂಡ ಗೆಲುವಿನ ಸನಿಹದಲ್ಲಿದ್ದಂತೆ ಕಂಡರೂ ಇದ್ದಕ್ಕಿದ್ದಂತೆ ಹಾರಿಸ್ ರೌಫ್ ಮತ್ತು ಶಾಹೀನ್ ಶಾ ಆಫ್ರಿದಿ ಸ್ಮಿತ್-ಇಂಗ್ಲಿಸ್ ಸೇರಿದಂತೆ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ಬೇಗನೇ ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಆಸ್ಟ್ರೇಲಿಯಾ ಕೇವಲ 155 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ನಾಯಕ ಪ್ಯಾಟ್ ಕಮಿನ್ಸ್ ಜವಾಬ್ದಾರಿ ವಹಿಸಿಕೊಂಡು ಮಿಚೆಲ್ ಸ್ಟಾರ್ಕ್ ಜೊತೆಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕಮ್ಮಿನ್ಸ್ 33 ರನ್ ಗಳಿಸಿ ಅಜೇಯರಾಗಿ ಮರಳಿದರು.
