ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯಾ ಅವರಿಗೆ ಉದ್ಯಮದಲ್ಲಿ ಕೋಟ್ಯಂತರ ರೂ. ವಂಚಿಸಿದ ಮಲ ಸಹೋದರ ವೈಭವ್ ಪಾಂಡ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ ವೈಭವ್ ಪಾಂಡ್ಯ ಪಾಲುದಾರಿಕೆ ಉದ್ಯಮದ 4.3 ಕೋಟಿ ರೂ. ಹಣವನ್ನು ಬೇರೆ ಕಡೆ ಹೂಡಿದ್ದ. ಇದರಿಂದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯಗೆ ಸಾಕಷ್ಟು ನಷ್ಟ ಉಂಟಾಗಿತ್ತು. ವೈಭವ್‌ನನ್ನು ಏಪ್ರಿಲ್ 10ರಂದು ಬಂಧಿಸಿ ವಂಚನೆ ಹಾಗೂ ನಕಲಿ ಸಹಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮೂವರು ಸಹೋದರರಾದ ಹಾರ್ದಿಕ್, ಕೃನಾಲ್ ಹಾಗೂ ವೈಭವ್ 2021ರಲ್ಲಿ ಪಾಲಿಮರ್ ಉದ್ಯಮವನ್ನು ಆರಂಭಿಸಿದ್ದರು. ಪಾಲುದಾರಿಕೆ ಒಪ್ಪಂದದಂತೆ ಹಾರ್ದಿಕ್, ಕೃನಾಲ್ ಬಂಡವಾಳದ ಶೇ.40 ರಷ್ಟು ಹೂಡಿದ್ದರೆ ವೈಭವ್ ಶೇ.20 ರಷ್ಟನ್ನು ತೊಡಗಿಸಿದ್ದರು. ಲಾಭವು ಕೂಡ ಹೂಡಿಕೆ ಹಣದಂತೆಗೆ ಬರಬೇಕೆಂದು ಒಪ್ಪಂದವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ
ಆದರೆ ವೈಭವ್ ಒಪ್ಪಂದವನ್ನು ಮುರಿದು ಲಾಭದ ಹಣವನ್ನು ಪಾಂಡ್ಯ ಸಹೋದರರಿಗೆ ತಿಳಿಯದಂತೆ ಬೇರೊಂದು ಕಂಪನಿಯಲ್ಲಿ ತೊಡಗಿಸಿದ್ದರು. ಇದರಿಂದ ಪಾಂಡ್ಯ ಸಹೋದರರಿಗೆ 4.3 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ಕೃನಾಲ್ ಪಾಂಡ್ಯ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರರಾಗಿದ್ದಾರೆ.
