ಕೇರಳದ ಯುವ ಲಾಂಗ್ ಜಂಪ್ ಪಟು ಮುರಳಿ ಶ್ರೀಶಂಕರ್, ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ 8.41 ಮೀ. ದೂರ ಜಿಗಿಯುವಲ್ಲಿ 24 ವರ್ಷದ ಮುರಳಿ ಯಶಸ್ವಿಯಾದರು. ಆ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು. ವೃತ್ತಿ ಜೀವನದ ಇದುರೆಗಿನ ಸ್ಪರ್ಧೆಯಲ್ಲಿ, 8.41 ಮೀ. ದೂರ ಜಿಗಿತ ಶ್ರೀಶಂಕರ್ ಅವರ ವೈಯಕ್ತಿಕ ಶ್ರೇಷ್ಠಸಾಧನೆಯಾಗಿದೆ.
ಆಗಸ್ಟ್ 19 ರಿಂದ ಆಗಸ್ಟ್ 27 ರವರೆಗೆ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಲಾಂಗ್ ಜಂಪ್ ವಿಭಾಗದಲ್ಲಿ ಅರ್ಹತೆ ಪಡೆಯಲು, 8.25 ಮೀ. ಮತ್ತು ಏಷ್ಯನ್ ಗೇಮ್ಸ್‌ನಲ್ಲಿ 7.95 ಮೀ. ದೂರ ಜಿಗಿತ ಮಾನದಂಡವಾಗಿ ನಿಗದಿಪಡಿಸಲಾಗಿತ್ತು.
ಅದಾಗಿಯೂ, ಈ ವರ್ಷದ ಆರಂಭದಲ್ಲಿ ಜೆಸ್ವಿನ್ ಆಲ್ಡ್ರಿನ್ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು (8.42) ದೂರವನ್ನು ಹಿಂದಿಕ್ಕಲು ಮುರಳಿ ಶ್ರೀಶಂಕರ್ ಅವರಿಗೆ ಸಾಧ್ಯವಾಗಲಿಲ್ಲ. ಕೇವಲ ಒಂದು ಸೆಂಟಿಮೀಟರ್ ದೂರದಲ್ಲಿ ಅವರಿಗೆ ಈ ಸಾಧನೆ ಸದ್ಯಕ್ಕೆ ಕೈತಪ್ಪಿದೆ.
ಭುವನೇಶ್ವರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಜೆಸ್ವಿನ್ ಆಲ್ಡ್ರಿನ್ 7.83 ಮೀ. ಜಿಗಿತದೊಂದಿಗೆ ಎರಡನೇ ಸ್ಥಾನ ಮತ್ತು ಮುಹಮ್ಮದ್ ಅನೀಸ್ ಯಾಹಿಯಾ (7.71 ಮೀಟರ್) ಮೂರನೇ ಸ್ಥಾನ ಪಡೆದರು. ಸೋಮವಾರ ನಡೆಯಲಿರುವ ಫೈನಲ್ ಸುತ್ತಿಗೆ ಒಟ್ಟು 12 ಲಾಂಗ್ ಜಂಪರ್‌ಗಳು ಅರ್ಹತೆ ಪಡೆದಿದ್ದಾರೆ.
ಡೈಮಂಡ್ ಲೀಗ್‌ನಲ್ಲಿ ಕಂಚಿನ ಪದಕ
ಜೂನ್ 9 ರಂದು, ಪ್ಯಾರಿಸ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಶ್ರೀಶಂಕರ್ ಕಂಚಿನ ಪದಕದ ಸಾಧನೆ ಮಾಡಿದ್ದರು. ಆ ಮೂಲಕ ಡೈಮಂಡ್ ಲೀಗ್ ಕೂಟದಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಅಥ್ಲೀಟ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದರು.
ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಮಾಜಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಅಥ್ಲೀಟ್ ಎನಿಸಿಕೊಂಡರು..