ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 32 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ಸೋಲೊಪ್ಪಿಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾದ ಮಹಿಳಾ ತಂಡ ಸತತ 2ನೇ ಬಾರಿಗೆ ವಿಶ್ವಕಪ್ ವಂಚಿತವಾಗಿದೆ.
ಕಳೆದ ವಿಶ್ವಕಪ್‌ನಲ್ಲೂ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ಸತತ ಎರಡನೇ ಬಾರಿಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಇನ್ನು 2010 ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ಗೇರಿದ್ದ ನ್ಯೂಜಿಲೆಂಡ್ ತಂಡ ಸೋಫಿ ಡಿವೈನ್ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಟೆಸ್ಟ್: ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ ಸುಲಭ ಗೆಲುವು
ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ 159 ರನ್ಗಳ ಗುರಿ ನೀಡಿತ್ತು. ಅಮೆಲಿಯಾ ಕೆರ್ 43 ರನ್, ಸುಜಿ ಬೇಟ್ಸ್ 32 ರನ್ ಮತ್ತು ಬ್ರೂಕ್ ಹ್ಯಾಲಿಡೇ 38 ರನ್‌ಗಳನ್ನು ಕಲೆ ಹಾಕಿ ಪ್ರಬಲ ಸವಾಲು ನೀಡಿತ್ತು.
ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗದಲ್ಲಿ ಮ್ಲಾಬಾ ಎರಡು ವಿಕೆಟ್ ಪಡೆದರೆ, ಟ್ರೇಯಾನ್, ಕ್ಲರ್ಕ್ ಮತ್ತು ಖಾಕಾ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್ಗೆ ಅತ್ಯುತ್ತಮ ಜೊತೆಯಾಟ ಲಭಿಸಿ 51 ರನ್‌ಗಳನ್ನು ಕಲೆಹಾಕಿತು. ಈ ಜೊತೆಯಾಟದ ಬಳಿಕ ತಂಡದಲ್ಲಿ ಪೆವಿಲಿಯನ್ ಪರೇಡ್ ಆರಂಭವಾಯಿತು. ಅನುಭವಿ, ಭರವಸೆಯ ಬ್ಯಾಟರ್‌ಗಳು ನ್ಯೂಜಿಲೆಂಡ್ ತಂಡವನ್ನು ಎದುರಿಸಲು ವಿಫಲರಾದರು. ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್‌ಗಳಿಗೆ ಸೋಲೊಪ್ಪಿಕೊಂಡಿತು.
