ಪಾಕಿಸ್ತಾನದ ಲಾಹೋರ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಕೀವೀಸ್ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿಗಾಗಿ ಟೀಮ್ ಇಂಡಿಯಾವನ್ನು ಮಾ.9ರಂದು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡವು ರಚಿನ್ ರವೀಂದ್ರ ಹಾಗೂ ಕೇನ್ ವಿಲಿಯಮ್ಸನ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 362 ರನ್ ಗಳಿಸಿತ್ತು.
363 ರನ್‌ಗಳ ಬೃಹತ್ ಮೊತ್ತವನ್ನು ತಲುಪಲು ಎಡವಿದ ತೆಂಬಾ ಬಾವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು, 50 ಓವರ್‌ಗಳಲ್ಲಿ 312 ರನ್‌ಗಳನ್ನು ಮಾಡಲಷ್ಟೇ ಶಕ್ತವಾಯಿತು. ಆ ಮೂಲಕ 50 ರನ್‌ಗಳಿಂದ ಸೋಲೊಪ್ಪಿಕೊಂಡಿದ್ದಲ್ಲದೇ, ಪ್ರಶಸ್ತಿಯ ಸುತ್ತನ್ನು ತಲುಪಲು ವಿಫಲವಾಯಿತು.
ದಕ್ಷಿಣ ಆಫ್ರಿಕಾ ಪರವಾಗಿ ಬ್ಯಾಟಿಂಗ್‌ನಲ್ಲಿ ಡೇವಿಡ್ ಮಿಲ್ಲರ್ ಶತಕ ಬಾರಿಸಿ(100 ರನ್) ಕೊನೆಯ ತನಕ ಹೋರಾಟ ನಡೆಸಿದರಾದರೂ, ಬೃಹತ್ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ದುಬೈಯ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾ.9ರಂದು ಟೀಮ್ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ರೋಹಿತ್ ಶರ್ಮಾ ಬಳಗವು ಸೋಲಿಸಿತ್ತು.
