ಟೀಂ ಇಂಡಿಯಾ 17 ವರ್ಷದ ನಂತರ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್ ಗೆಲುವಿನ ನಂತರ ಭಾರತದ ಆಟಗಾರರು ಕಣ್ಣೀರು, ಪರಸ್ಪರ ಆಲಿಂಗನ, ಆಕಾಶಕ್ಕೆ ಎಸೆಯುವಿಕೆ ಸೇರಿದ ಖುಷಿಯ ಕ್ಷಣಗಳನ್ನುಸೇರಿ ತಮ್ಮ ಭಾವನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಭಾರತ ಗೆಲುವು ಸಾಧಿಸಿದ ನಂತರ ಬರ್ಬೊಡೊಸ್ ಮೈದಾನದ ಮಣ್ಣನ್ನು ಕೂಡ ಸವಿದರು. ಇವೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಯಿತು.
ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಇದ್ಯಾವುದನ್ನು ಮೊದಲೇ ಅಂದುಕೊಂಡಿರಲಿಲ್ಲ. ನಾನು ಆ ಕ್ಷಣವನ್ನು ಅನುಭವಿಸುತ್ತಿದೆ. ನಮಗೆ ವಿಶ್ವಕಪ್ ಟ್ರೋಫಿ ನೀಡಿದ ಕಾರಣಕ್ಕಾಗಿ ಪಿಚ್‌ನ ಮಣ್ಣನ್ನು ಸವಿದೆ. ಈ ನಿರ್ದಿಷ್ಟ ಮೈದಾನ ಹಾಗೂ ಪಿಚ್‌ಅನ್ನು ನಾನು ನನ್ನ ಜೀವನದಲ್ಲಿ ಸದಾ ನೆನಪಿಸಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
“ಈ ಕ್ಷಣಗಳು ತುಂಬ ಮುಖ್ಯವಾಗಿತ್ತು. ಆದ ಕಾರಣ ನಾನು ಈ ಪಿಚ್‌ನ ಚೂರು ಮಣ್ಣನ್ನು ಸೇವಿಸಲು ಬಯಸಿದ್ದೆ. ನಮ್ಮೆಲ್ಲರ ಕನಸುಗಳು ನನಸಾಗುವ ಸ್ಥಳದಲ್ಲಿ ನಾನೇದರೂ ಮಾಡಲು ಬಯಸಿದ್ದೆ. ಹಾಗಾಗಿ ಮಣ್ಣು ಸೇವನೆಯ ಹಿಂದಿನ ಭಾವನೆ ಅದಾಗಿತ್ತು” ಎಂದು ರೋಹಿತ್ ಮಣ್ಣು ಸವಿದ ಕ್ಷಣದ ಬಗ್ಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ
“ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕನಸಿನಂತೆ ಭಾಸವಾಗುತ್ತಿದೆ. ವಿಶ್ವಕಪ್ ಗೆದ್ದರೂ ಸಹ ಗೆದ್ದಿಲ್ಲವೇ ಎಂದು ಅನಿಸುತ್ತಿದೆ. ರಾತ್ರಿಯಿಡೀ ನಾವು ಸಹ ಆಟಗಾರರೊಂದಿಗೆ ಸಂಭ್ರಮಿಸಿದೆವು. ನನಗೆ ನಿದ್ರಿಸಲು ಸಾಧ್ಯವಾಗಿರಲಿಲ್ಲ. ಆದರೂ ಪರವಾಗಿಲ್ಲ. ತವರಿಗೆ ಹೋಗಿ ನಿದ್ರಿಸಲು ಬೇಕಾದಷ್ಟು ಸಮಯವಿದೆ” ಎಂದು ಹೇಳಿದರು.
“ದೀರ್ಘ ಸಮಯದಿಂದ ಟ್ರೋಫಿ ಗೆಲ್ಲುವ ಬಗ್ಗೆ ಕನಸು ಕಂಡಿದ್ದೆವು. ಒಂದು ತಂಡವಾಗಿ ಅದಕ್ಕಾಗಿ ಕಠಿಣ ಪರಿಶ್ರಮ ವಹಿಸಿದ್ದೆವು. ತುಂಬಾ ಕಷ್ಟಪಟ್ಟು ಕೊನೆಗೆ ಟ್ರೋಫಿ ಗೆದ್ದಾಗ ತುಂಬಾ ಸಂತೋಷವಾಗುತ್ತಿದೆ. ನಾವೀಗ ನಿರಾಳಗೊಂಡಿದ್ದೇವೆ. ವಿಶ್ವಕಪ್ ಗೆಲುವಿನ ಹಿಂದೆ ತಂಡದ ಹಲವಾರು ವರ್ಷಗಳ ಪರಿಶ್ರಮವಿದೆ” ಎಂದು ಈ ಗೆಲುವು ಅತ್ಯಂತ ವಿಶೇಷ ಎಂದು ರೋಹಿತ್ ಶರ್ಮಾ ಬಣ್ಣಿಸಿದ್ದಾರೆ.
ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೂಡ 2011ರ ವಿಂಬಲ್ಡನ್ ಫೈನಲ್‌ನಲ್ಲಿ ರಫೆಲ್ ನಡಾಲ್ ಅವರನ್ನು ಮಣಿಸಿದ ನಂತರ ಟೆನಿಸ್ ಮೈದಾನದಲ್ಲಿ ಹುಲ್ಲನ್ನು ಸವಿದಿದ್ದರು.
