ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬ ಶುರು: ದಿಗ್ಗಜರ ಆಟದ ರಸದೌತಣಕ್ಕೆ ಸಿದ್ಧರಾಗಿ…

Date:

Advertisements

ಕ್ರಿಕೆಟ್‌ ಜಗತ್ತಿನಲ್ಲಿ ಮಾರ್ದನಿಸಿದ್ದ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ 2023ರ ಹಬ್ಬಕ್ಕೆ ಇನ್ನೇನು ಕ್ಷಣಗಣನೆ. ಭಾರತದಲ್ಲಿ ನಡೆಯುತ್ತಿರುವ ಪುರುಷರ ಬ್ಯಾಟು – ಚೆಂಡಾಟದ 14ನೇ ವಿಶ್ವಕಪ್ ಅಭಿಮಾನಿಗಳಿಗೆ ರಸದೌತಣವಾದರೆ ಪ್ರತಿ ತಂಡದ ಆಟಗಾರರಿಗೆ ತನ್ನ ದೇಶ ಕಪ್‌ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆ. ಮೈದಾನದಲ್ಲಿ ಉಭಯ ತಂಡಗಳ ರೋಷಾವೇಶ ಏನೇ ನಡೆದರೂ ಅಂತಿಮವಾಗಿ ಕ್ರಿಕೆಟ್‌ಗೆ ಮಾತ್ರ ಜಯ.

ಕ್ರಿಕೆಟ್ ಹುಟ್ಟು ಶುರುವಾದಾಗಿನಿಂದ ಹಲವಾರು ವರ್ಷಗಳು ಟೆಸ್ಟ್‌ ಪಂದ್ಯಗಳು ಮಾತ್ರ ಈ ಆಟವನ್ನು ಆಳುತ್ತಿದ್ದವು. ತಂಡಗಳು ಮಾತ್ರವಲ್ಲದೆ ಕ್ರಿಕೆಟ್ ಪ್ರೇಮಿಗಳು ಕೂಡ ಅಂತಿಮ ಫಲಿತಾಂಶಕ್ಕಾಗಿ ಭರ್ತಿ ಐದು ದಿನಗಳವರೆಗೂ ಕಾಯಬೇಕಿತ್ತು. ಹೊಸ ರೂಪು ಬರಬೇಕೆಂಬ ಹಂಬಲವೋ ಏನೋ 1975ರ ಜನವರಿ 3 ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿದ್ದ ಟೆಸ್ಟ್‌ ಪಂದ್ಯ ಮೂರು ದಿನಗಳ ನಿರಂತರ ಮಳೆಯಿಂದ ಸ್ಥಗಿತಗೊಂಡಿತ್ತು ಆಗ ರೂಪುಗೊಂಡಿದ್ದೆ ಏಕದಿನ ಪಂದ್ಯ ಎಂಬ ಹೊಸ ಪಯಣ.

ಸತತ ಮೂರು ದಿನ ಮಳೆಯಿಂದ ಪಂದ್ಯ ರದ್ದಾದ ಕಾರಣ 1975ರ ಜನವರಿ 5 ರಂದು ಅಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಯವರು ಪ್ರತಿ ತಂಡಕ್ಕೆ 8 ಓವರ್‌ಗಳಂತೆ ಪಂದ್ಯವನ್ನು ಆಡಿಸಿದರು. ಮೊದಲ ಐತಿಹಾಸಿಕ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ದಾಖಲೆ ಬರೆಯಿತು. ಆರಂಭದ ಪಂದ್ಯ ಯಶಸ್ವಿಯಾದ ಕಾರಣ 60 ಓವರ್‌ಗಳ ಏಕದಿನ ಪಂದ್ಯಗಳನ್ನು ಶುರು ಮಾಡಲು ಪ್ರಾರಂಭಿಸಲಾಯಿತು.

Advertisements

ನಂತರದ ವರ್ಷಗಳಲ್ಲಿ ಏಕದಿನ ಪಂದ್ಯಗಳಿಗೆ ಹೊಸ ಹುರುಪು ನೀಡುವ ಸಲುವಾಗಿ ಹಾಗೂ ಹಲವು ತಂಡಗಳನ್ನು ಒಟ್ಟಿಗೆ ಆಡಿಸುವುದಕ್ಕಾಗಿ 1975ರ ಜೂನ್‌ನಲ್ಲಿ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸಲಾಯಿತು. ಅಧಿಕೃತವಾಗಿ ಇದಕ್ಕೆ ‘ಪ್ರುಡೆನ್ಶಿಯಲ್ ಕಪ್’ ಎಂದು ಹೆಸರಿಡಲಾಯಿತು. ಇಂಗ್ಲೆಂಡ್‌ನಲ್ಲಿ ನಡೆದ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿ ಅಂಬೆಗಾಲಿಡುತ್ತಿದ್ದ ಭಾರತ ತಂಡವು ಸೇರಿ ಒಟ್ಟು 8 ತಂಡಗಳು ಆಡಿದ್ದವು.

1983ರ ವಿಶ್ವಕಪ್
1983 world cup

ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದ ಪುಟ್ಟ ದ್ವೀಪ ರಾಷ್ಟ್ರ

ಗಾರ್ಡನ್ ಗ್ರೀನಿಡ್ಜ್, ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಅಲ್ವಿನ್ ಕಾಲಿಚರನ್‌ರಂತಹ ಪುಟ್ಟ ದ್ವೀಪ ನಾಡಿನ ದೈತ್ಯ ಪಡೆಯ ವೆಸ್ಟ್‌ ಇಂಡೀಸ್ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಮೊಟ್ಟಮೊದಲ ಏಕದಿನ ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

1979ರಲ್ಲಿಯೂ ಸತತ ಎರಡನೇ ಬಾರಿ ವಿಶ್ವಕಪ್ ಟ್ರೋಫಿ ಗೆದ್ದು ಸೋಲಿಲ್ಲದ ಸರದಾರನಾದ ಬಲಿಷ್ಠ ಆಟಗಾರರಿದ್ದ ತಂಡ ವಿಂಡೀಸ್. ಈ ತಂಡ ಯಾವುದೇ ದೇಶದ ಯಾವುದೇ ಪಿಚ್‌ನಲ್ಲಿ ಕಣಕ್ಕಿಳಿದರೂ ಗೆಲುವು ದಾಖಲಿಸುತ್ತಿತ್ತು. ಇವೆರಡು ವಿಶ್ವಕಪ್‌ಗಳಲ್ಲಿ ಎಸ್‌ ವೆಂಕಟರಾಘವನ್‌ ನೇತೃತ್ವದ ಭಾರತ ತಂಡ ಕೇವಲ ಎರಡು ಪಂದ್ಯಗಳನ್ನಷ್ಟೆ ಜಯಗಳಿಸಿ ನಾಕೌಟ್‌ ಹಂತವನ್ನು ಪ್ರವೇಶಿಸದೆ ನಿರ್ಗಮಿಸಿತ್ತು.

ಈ ಸುದ್ದಿ ಓದಿದ್ದೀರಾ? 1983ರ ಭಾರತದ ವಿಶ್ವಕಪ್‌ ವಿಜಯೋತ್ಸವಕ್ಕೆ 40ರ ಸಂಭ್ರಮ; ಅಭಿಮಾನಿಗಳಿಂದ ರೋಚಕ ಪಂದ್ಯದ ನೆನಪು

ಹೊಸ ಇತಿಹಾಸ ಸೃಷ್ಟಿಸಿದ ಕಪಿಲ್‌ ದೇವ್ ನೇತೃತ್ವದ ಭಾರತ

ಮೂರನೇ ವಿಶ್ವಕಪ್‌ ಟೂರ್ನಿಯನ್ನು ಕೂಡ ಇಂಗ್ಲೆಂಡಿನಲ್ಲಿ ಆಯೋಜಿಸಲಾಗಿತ್ತು. ಮೊದಲ ಎರಡೂ ವಿಶ್ವಕಪ್‌ಗಳಲ್ಲಿ ಹಿನಾಯ ಸೋಲು ಕಂಡ ಭಾರತ ತಂಡದ ನಾಯಕತ್ವವನ್ನು 1983ರ ವಿಶ್ವಕಪ್‌ ತಂಡದಲ್ಲಿ ಬದಲಾಯಿಸಲಾಗಿತ್ತು. ಎಸ್‌ ವೆಂಕಟರಾಘವನ್‌ ಅವರಿಗೆ ಕೊಕ್‌ ನೀಡಿ 1979ರಲ್ಲಿ ಆಡಿದ್ದ ಮಧ್ಯಮ ವೇಗದ ಬೌಲರ್‌ ಕಪಿಲ್‌ ದೇವ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು.

ಕಪಿಲ್‌ ದೇವ್‌ ಸಾರಥ್ಯದ 14 ಆಟಗಾರರ ಬಳಗ ಚಾಂಪಿಯನ್​ ಆಗಿ ಚೊಚ್ಚಲ ಟ್ರೋಫಿ ಗೆಲ್ಲುತ್ತದೆ ಎಂಬುದನ್ನು ಯಾರೊಬ್ಬರೂ ಊಹಿಸಿರಲಿಲ್ಲ. ಟ್ರೋಫಿ ಹಂತದವರೆಗೂ ಇರಲಿ, ಕಳೆದ ಎರಡು ವಿಶ್ವಕಪ್‌ನಂತೆ ಲೀಗ್​​​ನಲ್ಲೇ ತವರಿಗೆ ಮರಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಅದರಲ್ಲೂ ವಿಂಡೀಸ್​ ವಿರುದ್ಧ ಫೈನಲ್​ ಗೆಲ್ಲುತ್ತೆ ಎಂಬುದು ಕನಸಿನ ಮಾತಾಗಿತ್ತು. ಇದೆಲ್ಲ ಲೆಕ್ಕಾಚಾರಗಳನ್ನು ಸುಳ್ಳು ಮಾಡಿತ್ತು ಕಪಿಲ್​ ದೇವ್​ ಸಾರಥ್ಯದ ಭಾರತ ತಂಡ.

ಈ ವಿಶ್ವಕಪ್‌ ಗೆಲುವು ಭಾರತದ ಕ್ರಿಕೆಟ್ ಭವಿಷ್ಯವನ್ನು ಬದಲಾಯಿಸಿತು. ಅಂದು ಖಜಾನೆಯಲ್ಲಿ ಹಣವಿಲ್ಲದೆ ಸರ್ಕಾರದ ನೆರವಿಗೆ ಬೇಡುತ್ತಿದ್ದ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆಯಲು ಪ್ರಮುಖ ಕಾರಣವಾಯಿತು.

dhoni 3

ಐದು ಬಾರಿ ಟ್ರೋಫಿ ಗೆದ್ದು ಏಕದಿನ ಕ್ರಿಕೆಟ್‌ ಸಾಮ್ರಾಟನಾದ ಆಸಿಸ್

ಆನಂತರದಲ್ಲಿ ಮುಂದೆ ನಡೆದ ವಿಶ್ವಕಪ್‌ ಟೂರ್ನಿಗಳನ್ನು 60 ಓವರ್‌ಗಳಿಂದ 50 ಓವರ್‌ಗಳಿಗೆ ಮಾರ್ಪಡಿಸಲಾಯಿತು. ಅಲ್ಲಿಂದ 1987 ರಿಂದ 2019ರವರೆಗೆ ನಡೆದ 9 ವಿಶ್ವಕಪ್‌ ಟೂರ್ನಿಗಳಲ್ಲಿ 5 ಬಾರಿ(1987, 1999, 2003, 2007, 2015) ಟ್ರೋಫಿ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜನಾಗಿ ಹೊರಹೊಮ್ಮಿದೆ.

2011ರಲ್ಲಿ ಭಾರತದಲ್ಲಿ ಆಯೋಜಿಸಲಾಗಿದ್ದ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಶ್ರೀಲಂಕಾವನ್ನು ಮಣಿಸಿ ಎರಡನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇದನ್ನು ಹೊರತುಪಡಿಸಿದರೆ 1992ರಲ್ಲಿ ಪಾಕಿಸ್ತಾನ, 1996 ರಲ್ಲಿ ಶ್ರೀಲಂಕಾ ಹಾಗೂ 2019ರಲ್ಲಿ ಇಂಗ್ಲೆಂಡ್‌ ತಲಾ ಒಂದೊಂದು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

ಶಿಖರದಿಂದ ತಳಮುಟ್ಟಿದ ವಿಂಡೀಸ್, 4 ದಶಕಗಳ ನಂತರ ಟ್ರೋಫಿ ಗೆದ್ದ ಇಂಗ್ಲೆಂಡ್

70 ಮತ್ತು 80 ರ ದಶಕದಲ್ಲಿ ವೆಸ್ಟ್ ಇಂಡೀಸ್‌ನ ಏಕದಿನ ಕ್ರಿಕೆಟ್ ಸಾಧನೆ ಉತ್ತುಂಗದಲ್ಲಿತ್ತು. ಈ ವೇಳೆಯಲ್ಲಿ ವಿಂಡೀಸ್ ಮಾಡಿದ್ದ ಸಾಧನೆಯನ್ನು ಯಾವುದೇ ತಂಡವು ಸರಿಗಟ್ಟಲು ಸಾಧ್ಯವಾಗಿರಲಿಲ್ಲ. 1975 ರಲ್ಲಿ ಚೊಚ್ಚಲ ಟ್ರೋಫಿಯ ಜೊತೆ 1979 ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು ಇವೆರೆಡು ವಿಶ್ವಕಪ್‌ಗಳಲ್ಲಿ ವಿಂಡೀಸ್‌ ಒಂದೂ ಪಂದ್ಯವನ್ನೂ ಸೋತಿರಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ವಿಂಡೀಸ್‌ ಸೋತಿದ್ದು 1983ರ ಫೈನಲ್‌ನಲ್ಲಿ ಭಾರತದ ಎದುರು ಮಾತ್ರ. 1987 ರ ನಂತರ ವಿಂಡೀಸ್ ಪ್ರಾಬಲ್ಯ ಮುಂದುವರಿಯಲಿಲ್ಲ. ಹಣ ಹೆಚ್ಚು ಬರುವ ಟಿ20 ಹಾಗೂ ಪ್ರೀಮಿಯರ್‌ ಲೀಗ್‌ನತ್ತ ತಂಡದ ಆಟಗಾರರು ಗಮನಹರಿಸಿದ ಕಾರಣ ಈ ಬಾರಿಯ ಏಕದಿನ ವಿಶ್ವಕಪ್‌ನ 10ರ ಬಳಗದಲ್ಲಿ ಅರ್ಹತೆ ಗಿಟ್ಟಿಸುಕೊಳ್ಳುವಲ್ಲಿ ವಿಫಲವಾಗಿದೆ.

ಹಾಗೆಯೇ ಕ್ರಿಕೆಟ್‌ನ ಪಿತಾಮಹ ಹಾಗೂ ಮತ್ತೊಂದು ಪ್ರಬಲ ತಂಡವಾಗಿರುವ ಇಂಗ್ಲೆಂಡ್‌ ಏಕದಿನ ವಿಶ್ವಕಪ್‌ ಶುರುವಾಗಿ 4 ದಶಕ ಕಳೆದರೂ ವಿಶ್ವಕಪ್‌ ಗೆಲ್ಲಲೂ ಸಾಧ್ಯವಾಗಿರಲಿಲ್ಲ. ಕಳೆದ 2019ರಲ್ಲಿ ಕಪ್‌ ಎತ್ತಿ ಹಿಡಿದು ತನ್ನ ಟ್ರೋಫಿಯ ಬರವನ್ನು ನೀಗಿಸಿಕೊಂಡಿತು.

14ನೇ ವಿಶ್ವಕಪ್ ಟ್ರೋಫಿ ಗೆಲ್ಲುವ ರೇಸಿನಲ್ಲಿ ಭಾರತ ಮುಂದು?

ಟಿ20 ಹಾಗೂ ಐಪಿಎಲ್‌ನಂಥ ಪ್ರೀಮಿಯರ್‌ ಲೀಗ್‌ ಪಂದ್ಯಗಳು ಹೆಚ್ಚು ಜನಪ್ರಿಯವಾಗುತ್ತಿರುವ ಸಂದರ್ಭದಲ್ಲಿ ಏಕದಿನ ಪಂದ್ಯಗಳಿಗೂ ಉತ್ತೇಜನ ಕೊಡುವ ಸಲುವಾಗಿ ಭಾರತದಲ್ಲಿ ಅದ್ದೂರಿಯಾಗಿ 14ನೇ ವಿಶ್ವಕಪ್‌ಅನ್ನು ಆಯೋಜಿಸಲಾಗುತ್ತಿದೆ. ಇದು ಭಾರತ ಆಯೋಜಿಸುತ್ತಿರುವ ನಾಲ್ಕನೇ ವಿಶ್ವಕಪ್. ಈ ಮೊದಲು 1987(ಪಾಕಿಸ್ತಾನದೊಂದಿಗೆ ಸಾರಥ್ಯ), 1996(ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದೊಂದಿಗೆ ಸಾರಥ್ಯ), 2011(ಶ್ರೀಲಂಕಾ ಹಾಗೂ ಬಾಂಗ್ಲಾದೇಶದೊಂದಿಗೆ ಸಾರಥ್ಯ)ರಲ್ಲಿ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ವಿಶ್ವಕಪ್‌ ಟೂರ್ನಿಯ ಆತಿಥ್ಯ ವಹಿಸುತ್ತಿದೆ.

ಇವೆಲ್ಲದರ ಜೊತೆ ಈಗಿನಿಂದಲೇ ಟ್ರೋಫಿ ಗೆಲ್ಲುವ ತಂಡದ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಕಳೆದ ಮೂರು ವಿಶ್ವಕಪ್‌ ಪ್ರಶಸ್ತಿಗಳನ್ನು ಸಾರಥ್ಯ ವಹಿಸುತ್ತಿರುವ ದೇಶಗಳೆ ಗೆಲ್ಲುತ್ತಿವೆ. 2011ರಲ್ಲಿ ಭಾರತದಲ್ಲಿ ಆಯೋಜಿಸಲಾದ ಟ್ರೋಪಿಯನ್ನು ಭಾರತವೇ ಗೆದ್ದಿತ್ತು. ಅದೇ ರೀತಿ 2015ರಲ್ಲಿ ಆಸ್ಟ್ರೇಲಿಯಾ ಹಾಗೂ 2019ರಲ್ಲಿ ಇಂಗ್ಲೆಂಡ್‌ ಆತಿಥ್ಯ ರಾಷ್ಟ್ರಗಳೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದವು. ಈ ಬಾರಿ ಭಾರತವೇ ಕಪ್‌ಅನ್ನು ಎತ್ತಿ ಹಿಡಿಯಲಿವೆ ಎಂದು ಹೇಳಲಾಗುತ್ತದೆ.

odi india team

ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಟೀಂ ಇಂಡಿಯಾವು ಏಕದಿನ, ಟಿ20 ಹಾಗೂ ಟಿಸ್ಟ್‌ ಮಾದರಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೂ ಕೂಡ ಭಾರತಕ್ಕೆ ಪ್ಲಸ್‌ ಪಾಯಿಂಟ್. ವಿಶ್ವದ ಯಾವುದೇ ಪಿಚ್‌ಗಳಲ್ಲಿ ಎಂತಹ ಬೌಲರ್‌ಗಳನ್ನು ಎದುರಿಸುವ ಶಕ್ತಿಯುಳ್ಳ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕೆ ಎಲ್‌ ರಾಹುಲ್‌ರಂಥ ಬ್ಯಾಟ್ಸಮನ್‌ಗಳಿದ್ದಾರೆ. ಬಲಾಢ್ಯ ತಂಡದ ಎದುರಾಳಿ ತಂಡಗಳನ್ನು ಕಟ್ಟಿಹಾಕುವಂತಹ ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ಆರ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾರಂತಹ ಬೌಲರ್‌ಗಳಿದ್ದಾರೆ. ಇವೆಲ್ಲ ಅಂಶಗಳು ಭಾರತವನ್ನು ಪ್ರಶಸ್ತಿ ಸನಿಹಕ್ಕೆ ತೆಗೆದುಕೊಂಡು ಹೋಗಬಹುದೆಂದು ಎನ್ನಲಾಗುತ್ತಿದೆ.

ಪ್ರಬಲ ತಂಡಗಳನ್ನು ಕಡೆಗಣಿಸುವಂತಿಲ್ಲ!

ಭಾರತ ಹೊರತುಪಡಿಸಿದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡಗಳನ್ನು ಕಡೆಗಣಿಸುವಂತಿಲ್ಲ. ಪಾಕಿಸ್ತಾನದ ಬಾಬರ್ ಅಜಂ, ಫಕರ್‌ ಅಜಂ, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್, ಸ್ಟೀವ್ ಸ್ಮಿತ್, ಇಂಗ್ಲೆಂಡಿನ ಜೋಸ್ ಬಟ್ಲರ್, ಜೇಸನ್‌ ರಾಯ್, ನ್ಯೂಜಿಲೆಂಡಿನ ಟ್ರೆಂಟ್ ಬೋಲ್ಟ್, ಕೇನ್‌ ವಿಲಿಯಮ್ಸ್‌ನ್ ಎದುರಾಳಿ ತಂಡಗಳ ನಿದ್ದೆಗೆಡಿಸಬಲ್ಲ ಆಟಗಾರರು. ಇನ್ನುಳಿದಂತೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಕೂಡ ಅನಿರೀಕ್ಷಿತ ಫಲಿತಾಂಶ ನೀಡುವ ತಂಡಗಳು. ಆದರೂ ಅಂತಿಮವಾಗಿ ನವಂಬರ್‌ 19ರಂದು ನಡೆಯುವ ಫೈನಲ್‌ ಪಂದ್ಯದ ಅಂತಿಮ ಎಸೆತವೆ ಟ್ರೋಫಿಯ ವಿಜೇತರನ್ನು ನಿರ್ಧರಿಸುತ್ತದೆ.

ಈ ಸುದ್ದಿ ಓದಿದ್ದೀರಾ? ವಿಶ್ವಕಪ್‌ ಏಕದಿನ ತಂಡಕ್ಕೆ ಸ್ಥಾನ ಪಡೆದ ಸ್ಪಿನ್ನರ್ ಆರ್‌ ಅಶ್ವಿನ್‌: ಬದಲಾವಣೆಯ 15ರ ಬಳಗದಲ್ಲಿ ಆಯ್ಕೆ

ಈ ಬಾರಿಯ ವಿಶ್ವಕಪ್ ವಿವಾದಕ್ಕೂ ಹತ್ತಿರ

2023ರ ವಿಶ್ವಕಪ್ ಶುರುವಾಗುವುದಕ್ಕೂ ಮೊದಲೇ ಹಲವು ವಿವಾದಗಳು ಮೆತ್ತಿಕೊಂಡಿದೆ. ಟೂರ್ನಿಯ ವೇಳಾಪಟ್ಟಿ ವಿಳಂಬ, ಟಿಕೆಟ್ ಮಾರಾಟದಂತಹ ಹಲವು ಅನಗತ್ಯ ವಿವಾದಗಳು ಐಸಿಸಿ ಹಾಗೂ ಬಿಸಿಸಿಐ ಸಂಸ್ಥೆಗಳನ್ನು ಗುರಿ ಮಾಡಿದೆ. ಈ ಬಾರಿ ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೂ ವೇಳಾಪಟ್ಟಿ ಪ್ರಕಟಗೊಂಡಿರಲಿಲ್ಲ. ಅದಲ್ಲದೆ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ, ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಪಾಕ್ ಹಠ ಹಿಡಿದಿತ್ತು. ಕೊನೆಗೂ ಪಾಕಿಸ್ತಾನದ ಬೇಡಿಕೆಗೆ ಜಗ್ಗದೆ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿತು.

Chinnaswamy cricket

ಮೊಹಾಲಿ, ರಾಜ್‌ಕೋಟ್, ರಾಂಚಿ, ಇಂದೋರ್ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಪಂದ್ಯಗಳು ಕೈತಪ್ಪುತ್ತಿದ್ದಂತೆ ಅಲ್ಲಿನ ರಾಜ್ಯ ಸಂಸ್ಥೆಗಳ ಅಧಿಕಾರಿಗಳು ಬಹಿರಂಗವಾಗಿ ಬಿಸಿಸಿಐ ಮೇಲೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಕೂಡ ನದರ್‌ಲ್ಯಾಂಡ್‌ನಂಥ ದುರ್ಬಲ ಪಂದ್ಯವನ್ನು ಆಯೋಜಿಸಲಾಗಿದೆ. ನಾಕೌಟ್‌ ಪಂದ್ಯಗಳಿಗಷ್ಟೆ ಆದ್ಯತೆ ನೀಡಲಾಗುತ್ತಿದೆ. ಗುಜರಾತ್‌ನ ಅಹಮದಾಬಾದ್‌ ಕ್ರೀಡಾಂಗಣಕ್ಕೆ ಈ ಬಾರಿ ಹೆಚ್ಚು ಆದ್ಯತೆ ನೀಡುತ್ತಿರುವುದು ಕೂಡ ಮಾಜಿ ಆಟಗಾರರ ಕೋಪಕ್ಕೆ ಕಾರಣವಾಗಿದೆ.

ಇದೆಲ್ಲದರ ಜೊತೆ ಬಿಸಿಸಿಐ ಹಲವು ಬಾರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಮಸ್ಯೆ ಉಂಟು ಮಾಡಿತ್ತು. ನ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಪಂದ್ಯವನ್ನು ನ.14ಕ್ಕೆ ಬದಲಾಯಿಸಲಾಯಿತು. ಅಲ್ಲದೆ ಟಿಕೆಟ್‌ಗಳ ಮಾರಾಟ ವಿಧಾನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಜೊತೆ ಹಲವು ಮಾಜಿ ಆಟಗಾರರು ಬಹಿರ೦ಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇವೆಲ್ಲವೂ ಬಿಸಿಸಿಐಅನ್ನು ಮುಜುಗರಕ್ಕೀಡು ಮಾಡಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X