ಒಲಿಂಪಿಕ್ಸ್ ಮತ್ತು ವರ್ಲ್ಡ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಜುಲೈ 7ರಂದು ನಡೆಯಲಿರುವ ಪ್ಯಾರಿಸ್ ಡೈಮಂಡ್ ಲೀಗ್‌ನಿಂದ ಹೊರಗುಳಿಯಲಿದ್ದಾರೆ. ಪ್ಯಾರಿಸ್ ಡೈಮಂಡ್ ಲೀಗ್‌ನ ವೆಬ್‌ಸೈಟ್‌ನಲ್ಲಿ ‘ಐದು ಒಲಿಂಪಿಕ್ ಚಾಂಪಿಯನ್‌ಗಳು, ಆರು ವರ್ಲ್ಡ್ ಚಾಂಪಿಯನ್‌ಗಳು ಮತ್ತು ಚಾರ್ಲೆಟಿಯಲ್ಲಿ ಹನ್ನೆರಡು ಯುರೋಪಿಯನ್ ಚಾಂಪಿಯನ್‌ಗಳು’ ಎಂಬ ಶೀರ್ಷಿಕೆಯಡಿ ಪ್ರಕಟಿಸಿರುವ ಪಟ್ಟಿಯಲ್ಲಿ ನೀರಜ್ ಹೆಸರನ್ನು ಉಲ್ಲೇಖಿಸಲಾಗಿಲ್ಲ.
ಪ್ರಕಟಣೆಯಲ್ಲಿ ಐದು ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್‌ಗಳನ್ನು ಹೆಸರಿಸಲಾಗಿದೆ; ಫೇಯ್ತ್ ಕಿಪ್ಯೆಗೊನ್, ಮೊಂಡೋ ಡುಪ್ಲಾಂಟಿಸ್ (ಪೋಲ್ ವಾಲ್ಟ್), ಮಲೈಕಾ ಮಿಹಾಂಬೊ (ಲಾಂಗ್ ಜಂಪ್), ವ್ಯಾಲರಿ ಅಲ್ಮನ್ (ಡಿಸ್ಕಸ್), ಮತ್ತು ವೊಜ್ಸಿಕ್ ನೋವಿಕಿ (ಹ್ಯಾಮರ್ ಥ್ರೋ) – ಈ ಐವರು ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ನೀರಜ್ ಅವರು ಲೀಗ್‌ನಿಂದ ಹೊರಗುಳಿದಿದ್ದಾರೆ.
‘ಓಸ್ಟ್ರಾವಾ ಗೋಲ್ಡನ್ ಸ್ಪೈಕ್ ಮೀಟ್’ನಲ್ಲಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡ ನೀರಜ್, ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದರು. ಇನ್ನು, ಅವರ ಮುಂದಿನ ದೊಡ್ಡ ಸ್ಪರ್ಧೆ ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಆಗಿರಲಿದೆ.
ಮೇ ತಿಂಗಳಲ್ಲಿ ಭುವನೇಶ್ವರದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುವುದಾಗಿ ನೀಜರ್ ಖಚಿತಪಡಿಸಿದ್ದರು. ತರಬೇತಿ ಸಮಯದಲ್ಲಿ ಅವರ ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ಓಸ್ಟ್ರಾವಾ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ.
ಸದ್ಯ, ಜುಲೈ 26ರಿಂದ ಫ್ಯಾರಿಸ್‌ನಲ್ಲಿಯೇ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ನೀರಜ್ ಸಿದ್ದತೆ ನಡೆಸುತ್ತಿದ್ದಾರೆ. ಅದಕ್ಕೂ ಮುನ್ನ ಯಾವುದೇ ಸಮಸ್ಯೆಯನ್ನು ಎದುರಿಸಲು ಸಿದ್ದರಿಲ್ಲವೆಂದು ಹೇಳಲಾಗುತ್ತಿದೆ.