- ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ ರೈತರಿಂದ ಬೆಂಬಲ
- ಬ್ರಿಜ್ಭೂಷಣ್ರನ್ನು ಮೇ 21ರೊಳಗೆ ಬಂಧಿಸಲು ಗಡುವು ನೀಡಿದ ಕುಸ್ತಿಪಟುಗಳು
ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ವಿವಿಧ ರಾಜಕೀಯ ಪಕ್ಷಗಳ ಬೆಂಬಲದ ನಂತರ ಇದೀಗ ಉತ್ತರ ಭಾರತದ ರೈತರೂ ಕೈಜೋಡಿಸಿದ್ದಾರೆ.
ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಸುಮಾರು 500ಕ್ಕೂ ಹೆಚ್ಚು ರೈತರು ಸೋಮವಾರ ನವದೆಹಲಿಯ ಜಂತರ್ ಮಂತರ್‌ಗೆ ಆಗಮಿಸಿ ಭಾರತೀಯ ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಗುಂಪು ಜಂತರ್ಮಂತರ್ಗೆ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅವರನ್ನು ತಡೆದಿದ್ದಾರೆ. ಇದನ್ನು ಲೆಕ್ಕಿಸದ ರೈತರು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ, ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಅಭಿಮನ್ಯು ಕೊಹಾದ್, ಕುಸ್ತಿಪಟುಗಳು ರೈತರ ಕುಟುಂಬಗಳಿಗೆ ಸೇರಿದವರು, ಆದ್ದರಿಂದ ಅವರನ್ನು ಬೆಂಬಲಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. “ಇದು ಮಹಿಳೆಯರಿಗೆ ಸಾಮಾಜಿಕ ನ್ಯಾಯದ ವಿಷಯವಾಗಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ‘ಕೊಲ್ಲಬೇಕೆನಿಸಿದರೆ ನಮ್ಮನ್ನು ಕೊಂದುಬಿಡಿ’; ಪೊಲೀಸರ ಅಮಾನವೀಯ ವರ್ತನೆಗೆ ವಿನೇಶ್ ಫೋಗಟ್ ಆಕ್ರೋಶ
ಪ್ರತಿಭಟನೆಗೆ ವಿವಿಧ ಕಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಂತರರಾಷ್ಟ್ರೀಯ ಖ್ಯಾತಿ ಕುಸ್ತಿಪಟು ವಿನೇಶ್ ಫೋಗಟ್, `ಪ್ರತಿಭಟನೆಯನ್ನು ಯಾರೂ ಹೈಜಾಕ್ ಮಾಡಿಲ್ಲ. ನಾವು ರಾಜಕೀಯ ಮಾಡಲು ಬಂದಿಲ್ಲ. ನಮಗೆ ನ್ಯಾಯ ಸಿಗಬೇಕು. ನಮ್ಮ ಹೋರಾಟಕ್ಕೆ ಯಾರು ಬೇಕಾದರೂ ಬೆಂಬಲಿಸಬಹುದು. ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಇದು ಕುಸ್ತಿಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ’ ಎಂದು ತಿಳಿಸಿದ್ದಾರೆ.
ಬ್ರಿಜ್ಭೂಷಣ್ರನ್ನು ಮೇ 21ರೊಳಗೆ ಬಂಧಿಸದಿದ್ದರೆ ಪ್ರತಿಭಟನೆಯು ತೀವ್ರಸ್ವರೂಪ ಪಡೆಯಲಿದೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದು, ಮುಂದಿನ ನಡೆ ಬಗ್ಗೆ ನಿರ್ಧರಿಸಲು ರಚಿಸಿದ್ದ 31 ಸದಸ್ಯರ ಸಮಿತಿಯ ಸಲಹೆಯ ಮೇರೆಗೆ ಕುಸ್ತಿಪಟುಗಳು ಈ ಘೋಷಣೆ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ 2000ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಯುತ್ತಿರುವ ಜಂತರ್-ಮಂತರ್‌ಗೆ ಭೇಟಿ ನೀಡಿದರು. ರೈತ ಮುಖಂಡ ರಾಕೇಶ್ ಟಿಕಾಯತ್ ಸೇರಿ ಹಲವರು ಭೇಟಿ ನೀಡಿ ಬ್ರಿಜ್‌ಭೂಷಣ್ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.