2025 ರ ಚಾಂಪಿಯನ್ಸ್ ಟ್ರೋಫಿಯ ಆಯೋಜಕತ್ವದ ಜವಬ್ದಾರಿ ಹೊತ್ತುಕೊಂಡಿದ್ದ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ನಿರ್ಗಮಿಸಿದೆ. ಸುಮಾರು 29 ವರ್ಷಗಳ ನಂತರ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ,ತಂಡವು ಸೆಮಿಫೈನಲ್ ತಲುಪಲು ಸಾಧ್ಯವಾಗದ ಕಾರಣ ತನ್ನದೇ ತವರಿನಲ್ಲಿ ಮುಜುಗರವನ್ನು ಎದುರಿಸಬೇಕಾಯಿತು. ಇದರ ಜೊತೆಗೆ ಟೂರ್ನಿ ಆಯೋಜಿಸಲು 1800 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಪಾಕಿಸ್ತಾನಕ್ಕೆ ತನ್ನ ತಂಡದ ಆಟವನ್ನು ಕೇವಲ 16 ಗಂಟೆಗಳ ಕಾಲ ಮಾತ್ರ ಆಡಲು ಸಾಧ್ಯವಾಯಿತು.
ಫೆಬ್ರವರಿ 27 ಗುರುವಾರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಗ್ರೂಪ್ ಹಂತದ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಯಿತು. ಈ ಟೂರ್ನಿಯಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯ ಇದಾಗಿದ್ದು, ಎರಡೂ ತಂಡಗಳು ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದವು. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕ ಮಾತ್ರ ಪಡೆದು ಟೂರ್ನಿಯಿಂದ ಹೊರಬಿದ್ದವು.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ಪಾಕ್ ವಿರುದ್ಧದ ಒಂದು ಪಂದ್ಯ – ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳ ಕಿರೀಟ
1996 ರ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಪಾಕಿಸ್ತಾನದಲ್ಲಿ ನಡೆಯುತ್ತಿದ್ದರಿಂದ ಈ ಟೂರ್ನಮೆಂಟ್ ಪಾಕಿಸ್ತಾನಕ್ಕೂ ವಿಶೇಷವಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ವರದಿಗಳ ಪ್ರಕಾರ, ಪಾಕಿಸ್ತಾನ ಮಂಡಳಿಯು ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಪಂದ್ಯಾವಳಿಯ ಸ್ಥಳಗಳ ಕ್ರೀಡಾಂಗಣಗಳನ್ನು ನವೀಕರಿಸಲು 1800 ಕೋಟಿ ರೂಪಾಯಿಗಳನ್ನು(ಪಾಕ್ ನಾಣ್ಯ) ಖರ್ಚು ಮಾಡಿದೆ.
ಇಷ್ಟೊಂದು ದೊಡ್ಡ ಖರ್ಚು ಮಾಡಿದ ನಂತರ ಪಾಕಿಸ್ತಾನ ತಂಡ ತನ್ನ ಐತಿಹಾಸಿಕ ಕ್ರೀಡಾಂಗಣಗಳಲ್ಲಿ ಆಟವಾಡಿದ್ದು ಕೇವಲ 16 ಗಂಟೆಗಳ ಕಾಲ ಮಾತ್ರ. ಸುಮಾರು 8 ಗಂಟೆಗಳ ಕಾಲ ನಡೆದಿದ್ದ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ, ತನ್ನ ಮುಂದಿನ ಪಂದ್ಯವನ್ನು ಟೀಂ ಇಂಡಿಯಾ ವಿರುದ್ಧ ಕೇವಲ 8 ಗಂಟೆಗಳಲ್ಲಿ ಸೋತಿತ್ತು. ಅಂದರೆ ಪಿಸಿಬಿ, ಕ್ರೀಡಾಂಗಣಗಳನ್ನು ಸುಧಾರಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿತ್ತಾದರೂ, ತನ್ನ ತಂಡವನ್ನು ಸುಧಾರಿಸಲು ಅಗತ್ಯವಾದ ಕಠಿಣ ಮತ್ತು ನಿಖರವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
