ಈ ವರ್ಷದ ಕೊನೆಯಲ್ಲಿ ಭಾರತದ ಆಯೋಜನೆಗೊಳ್ಳುವ ಐಸಿಸಿ ವನಿತಾ ವಿಶ್ವಕಪ್ ಕ್ರಿಕೆಟ್‌ಗೆ ಫಾತಿಮಾ ಸನಾ ನಾಯಕತ್ವದ ಪಾಕಿಸ್ತಾನ ಅರ್ಹತೆ ಪಡೆದಿದೆ.
ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಅಜೇಯವಾಗಿ ಆಡುವ ಮೂಲಕ ಮೆಗಾ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಲಾಹೋರ್‌ನಲ್ಲಿ ಥಾಯ್ಲೆಂಡ್ ತಂಡವನ್ನು 87 ರನ್‌ಗಳಿಂದ ಸೋಲಿಸುವ ಮೂಲಕ ಅತಿಥೇಯ ಪಾಕಿಸ್ತಾನ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿತು.
ಪಾಕಿಸ್ತಾನದ ಮೆಗಾ ಟೂರ್ನಿಗೆ ಅರ್ಹತೆ ಪಡೆದಿರುವುದರಿಂದ, ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಲಿರುವ ಟೂರ್ನಮೆಂಟ್ ಮಾದರಿಯಲ್ಲಿ ಬದಲಾವಣೆಯಾಗಲಿದೆ. ಪಾಕಿಸ್ತಾನವು ಭಾರತಕ್ಕೆ ಪ್ರಯಾಣಿಸುತ್ತಿಲ್ಲವಾದ್ದರಿಂದ, ವನಿತಾ ವಿಶ್ವಕಪ್ ಕೂಟವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ವಂಚಿಸಲು ಹೋಗಿ ಅಂಪೈರ್ ಕೈಗೆ ಸಿಕ್ಕಿಬಿದ್ದ ಸುನಿಲ್ ನರೈನ್, ಎನ್ರಿಕ್ ನೋಕಿಯಾ!
ಮೊದಲ ಬಾರಿಗೆ ಅರ್ಹತಾ ಪಂದ್ಯಗಳನ್ನು ಆಯೋಜಿಸುತ್ತಿದ್ದ ಪಾಕಿಸ್ತಾನ, ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿತು. ಅದರ ನಂತರ, ಪಾಕಿಸ್ತಾನವು ಸ್ಕಾಟ್ಲಂಡ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ವೆಸ್ಟ್ ಇಂಡೀಸ್ ತಂಡವನ್ನು 65 ರನ್‌ಗಳಿಂದ ಪರಾಭವಗೊಳಿಸತು. ಕೊನೆಯಲ್ಲಿ ಥಾಯ್ಲೆಂಡ್ ವಿರುದ್ಧ ಜಯಗಳಿಸಿ ಅರ್ಹತೆ ಪಡೆಯಿತು.
ಐಸಿಸಿ ವನಿತಾ ವಿಶ್ವಕಪ್ 2025ರ ಕೂಟಕ್ಕೆ ಅತಿಥೇಯ ಭಾರತ ಅರ್ಹತೆಯನ್ನು ಗಳಿಸಿದ್ದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಅಗ್ರ 6 ಸ್ಥಾನಗಳಲ್ಲಿ ಸ್ಥಾನ ಪಡೆಯುವ ಮೂಲಕ ಟೂರ್ನಿಗೆ ಪ್ರವೇಶ ಪಡೆದಿವೆ.
ಬಾಂಗ್ಲಾದೇಶ ಪ್ರಸ್ತುತ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದೆ. ಆದರೆ ಬಾಂಗ್ಲಾ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.