ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ-2025ರ ಸೆಮಿಫೈನಲ್ ತಲುಪುವ ಆಸೆಗಳು ಕ್ಷೀಣಿಸುತ್ತಿವೆ. ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಎ ಗುಂಪಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕ್‌ಗೆ ಇದು ಸತತ ಎರಡನೇ ಸೋಲಾಗಿದೆ.
ಮೊಹ್ಮದ್ ರಿಜ್ವಾನ್ ಬಳಗಕ್ಕೆ ಸೆಮಿಫೈನಲ್ ಹಾದಿ ಕಠಿಣವಾದರೂ, ಪಾಕಿಸ್ತಾನ ತಂಡದ ಸೆಮಿಫೈನಲ್ ಬಾಗಿಲು ಇನ್ನೂ ಸಂಪೂರ್ಣ ಮುಚ್ಚಿಲ್ಲ. ಬಾಂಗ್ಲಾದೇಶದ ವಿರುದ್ಧ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಜತೆಗೆ ತಂಡದ ಸೆಮಿಫೈನಲ್ ತಲುಪುವ ಅವಕಾಶ ನಾಕೌಟ್ ಹಂತದ ಇತರ ಫಲಿತಾಂಶಗಳನ್ನು ಆಧರಿಸಿದೆ.
ಒಂದು ವೇಳೆ ನ್ಯೂಜಿಲೆಂಡ್ ತಂಡ ಭಾರತ ಹಾಗೂ ಬಾಂಗ್ಲಾದೇಶ ಜತೆಗಿನ ಪಂದ್ಯಗಳನ್ನು ಸೋತಲ್ಲಿ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂರು ಪಂದ್ಯಗಳಿಂದ ತಲಾ ಎರಡು ಅಂಕಗಳನ್ನು ಕಲೆ ಹಾಕಿದಂತಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅತ್ಯುತ್ತಮ ರನ್‌ರೇಟ್ ಹೊಂದಿ ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಇರುತ್ತದೆ.
ಹೀಗಾದಲ್ಲಿ ಪಾಕಿಸ್ತಾನ ತಂಡ ಉತ್ತಮ ನೆಟ್ ರನ್ ರೇಟ್ ಪಡೆದು ಗ್ರೂಪ್-ಎ ನಿಂದ 2ನೇ ತಂಡವಾಗಿ ಸೆಮಿಫೈನಲ್ಗೇರಬಹುದು. ಇಂತಹದೊಂದು ಪವಾಡ ಸಂಭವಿಸಿದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿ ಕೂಡ ಆಗಬಹುದು. ಅಂದರೆ ಗ್ರೂಪ್-ಎ ನಿಂದ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ಗೇರಿದರೆ, ಉಭಯ ತಂಡಗಳು ಗ್ರೂಪ್-ಬಿ ನಲ್ಲಿರುವ ತಂಡಗಳ ವಿರುದ್ಧ ಸೆಣಸಲಿದೆ.
ಈ ಸುದ್ದಿ ಓದಿದ್ದೀರಾ? ವುಮೆನ್ಸ್ ಪ್ರೀಮಿಯರ್ ಲೀಗ್ | ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಹೊಸ ಇತಿಹಾಸ ಸೃಷ್ಟಿ
ಈ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಜಯ ಸಾಧಿಸಿದರೆ, ಉಭಯ ತಂಡಗಳು ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಬಹುದು. ಆದರೆ ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ತಂಡದ ಗೆಲುವನ್ನು ಪಾಕಿಸ್ತಾನ ಎದುರು ನೋಡಬೇಕಿದೆ. ಒಂದು ವೇಳೆ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ, ಪಾಕಿಸ್ತಾನ ತಂಡ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಹಾಗೂ ಭಾರತ ತಂಡಗಳು ಗೆಲ್ಲಬೇಕು. ಹಾಗೆಯೇ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸಬೇಕು.
ಪಾಕಿಸ್ತಾನದ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ಎರಡು ಪಂದ್ಯಗಳಿಂದ ನಾಲ್ಕು ಅಂಕ ಕಲೆಹಾಕಿ ಈಗಾಗಲೇ ಸೆಮಿಫೈನಲ್ ತಲುಪಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 49.4 ಓವರ್ಗಳಲ್ಲಿ 241 ರನ್ ಕಲೆಹಾಕಿದರೆ, ಭಾರತ ತಂಡವು ಈ ಗುರಿಯನ್ನು ಕೇವಲ 42.3 ಓವರ್ಗಳಲ್ಲಿ ಗುರಿ ಮುಟ್ಟಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
