ಇಂಧನ ಲಭ್ಯತೆ ಕೊರತೆಯಿಂದಾಗಿ ಪಾಕಿಸ್ತಾನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳು ಸೇರಿದಂತೆ 48 ವಿಮಾನಗಳನ್ನು ರದ್ದುಗೊಳಿಸಿದೆ.
ದೈನಂದಿನ ವಿಮಾನಗಳಿಗೆ ಇಂಧನ ಪೂರೈಕೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳ ನಿರ್ಗಮನವನ್ನು ಮರುಹೊಂದಿಸಲಾಗಿದೆ ಎಂದು ಪಿಐಎ ವಕ್ತಾರರು ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.
ಇಂಧನದ ಅಲಭ್ಯತೆಯಿಂದಾಗಿ 13 ದೇಶೀಯ ವಿಮಾನಗಳು ಮತ್ತು ಅವುಗಳಲ್ಲಿ 11 ಅಂತಾರಾಷ್ಟ್ರೀಯ ಮಾರ್ಗಗಳನ್ನು ರದ್ದುಗೊಳಿಸಲಾಗಿದೆ. ಇತರ ಹನ್ನೆರಡು ವಿಮಾನಗಳು ವಿಳಂಬವಾಗಿವೆ.
ಪಿಐಎ ಪ್ರಕಾರ, ರದ್ದಾದ ವಿಮಾನಗಳ ಪ್ರಯಾಣಿಕರನ್ನು ಪರ್ಯಾಯ ವಿಮಾನಗಳಿಗೆ ಸ್ಥಳಾಂತರಿಸಲಾಗಿದೆ. ಈ ನಿರ್ಧಾರದ ನಂತರ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಪಿಐಎ ಟ್ರಾವೆಲ್ ಏಜೆಂಟ್ ಅವರನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ವಂಶ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ
ಪಿಐಎ ಸಂಸ್ಥೆ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಸ್ಟೇಟ್ ಆಯಿಲ್(ಪಿಎಸ್‌ಒ) ಸಂಸ್ಥೆಗೆ ಪಾವತಿಯನ್ನು ಉಳಿಸಿಕೊಂಡಿರುವ ಕಾರಣ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಏರ್‌ಲೈನ್‌ನ ಮನವಿಯ ಹೊರತಾಗಿಯೂ, ಕಾರ್ಯಾಚರಣೆಯ ವೆಚ್ಚಗಳಿಗಾಗಿ 23 ಶತಕೋಟಿ ಡಾಲರ್ ನೆರವನ್ನು ನೀಡಲು ಪಾಕಿಸ್ತಾನ ಸರ್ಕಾರ ನಿರಾಕರಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ.
ಪಿಐಎಗೆ ಪಿಎಸ್‌ಒನಿಂದ ಇಂಧನವನ್ನು ಪಾವತಿಸಲು ದಿನಕ್ಕೆ 10 ಕೋಟಿ ರೂ. ಅಗತ್ಯವಿದೆ. ಪಾವತಿಯನ್ನು ಮುಂಗಡ ನೀಡಿದರೆ ಮಾತ್ರ ಇಂಧನ ಪೂರೈಸಲಾಗುತ್ತದೆ. ಆದರೆ ಮುಂಗಡ ಪಾವತಿಸದ ಕಾರಣ ವಿಮಾನಯಾನ ಸಂಸ್ಥೆಗೆ ಇಂಧನ ಪೂರೈಕೆ ಮಾಡಲಾಗಿಲ್ಲ. ಇದು ಅನಿಶ್ಚಿತತೆಗೆ ಕಾರಣವಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದಿನ ದಿನಗಳಲ್ಲೂ ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್‌ನಲ್ಲಿ, ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮೊದಲ ಬಾರಿಗೆ 300 ರೂ.ಗೆ ಏರಿಕೆಯಾಗಿವೆ. ಪ್ರಧಾನ ಮಂತ್ರಿ ಅನ್ವಾರುಲ್ ಹಕ್ ಕಾಕರ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ ಪೆಟ್ರೋಲ್ ಮತ್ತು ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಲೀಟರ್‌ಗೆ ರೂ. 14.91 ಮತ್ತು ರೂ. 18.44 ರೂ. ಹೆಚ್ಚಿಸಿದೆ.
ಈ ಏರಿಕೆಯೊಂದಿಗೆ ಪೆಟ್ರೋಲ್ ಬೆಲೆ 305.36 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ 311.84 ರೂ.ಗೆ ಏರಿಕೆಯಾಗಿದೆ.