ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಮನು ಭಾಕರ್ ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದಾರೆ. ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಮಿಶ್ರ ವಿಭಾಗದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಹಾಗೂ ಸರ್ಬಜೋತ್ ಸಿಂಗ್ ಜೋಡಿ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ.
ಇದೇ ವಿಭಾಗದಲ್ಲಿ ಮತ್ತೊಂದು ಜೋಡಿ ಸಗ್ವಾನ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು 10ನೇ ಸ್ಥಾನ ಪಡೆದರು. ವೈಯಕ್ತಿಕ ವಿಭಾಗದಲ್ಲಿ ಮತ್ತೊಬ್ಬ ಶೂಟರ್ ಆದ ರಮಿತಾ ಜಿಂದಾಲ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಅರ್ಹತಾ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರ್ಬಜೋತ್ ಸಿಂಗ್ ಜೋಡಿ 193,195 ಹಾಗೂ 192 ಅಂಕಗಳಿಸಿ ಜುಲೈ 30 ರಂದು ನಡೆಯುವ ಕಂಚಿನ ಪದಕದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿನ್ ಯೆ ಹೊ ಹಾಗೂ ವೊನ್ನೊ ಲೀ ವಿರುದ್ಧ ಸ್ಪರ್ಧಿಸಲಿದ್ದಾರೆ. ಟರ್ಕಿ ಹಾಗೂ ಸರ್ಬಿಯಾದ ಸ್ಪರ್ಧಿಗಳು ಚಿನ್ನ ಹಾಗೂ ಬೆಳ್ಳಿ ಪದಕದ ಪಂದ್ಯಕ್ಕೆ ಪೈಪೋಟಿ ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024 | ವಿಶ್ವ ಕ್ರೀಡಾ ಹಬ್ಬಕ್ಕೆ ಕ್ಷಣಗಣನೆ ಆರಂಭ; ದಾಖಲೆ ಬರೆಯುವರೆ ಭಾರತದ ಕ್ರೀಡಾಪಟುಗಳು?
ಬ್ಯಾಡ್ಮಿಂಟನ್ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ತನಿಸಾ ಕ್ರಸ್ಟೋ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿದರು.
10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಪೃಥ್ವಿರಾಜ್ ತೊಂಡೈಮನ್ ಅರ್ಹತಾ ಸುತ್ತಿನಲ್ಲಿಯೇ 28ನೇ ಸ್ಥಾನಗಳಿಸಿ ಸ್ಪರ್ಧೆಯಿಂದ ನಿರ್ಗಮಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಎರಡನೇ ದಿನದಾಟದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. 22 ವರ್ಷ ವಯಸ್ಸಿನ ಭಾಕರ್ ಫೈನಲ್ನಲ್ಲಿ 221.7 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದರು. ದಕ್ಷಿಣ ಕೊರಿಯಾದ ಒಯೇ ಜಿನ್ ಹಾಗೂ ಕಿಮ್ ಯೆಜಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದರು.
ಒಲಿಂಪಿಕ್ಸ್ನ ಶೂಟಿಂಗ್ ವಿಭಾಗದಲ್ಲಿ 10 ವರ್ಷದ ನಂತರ ಭಾರತಕ್ಕೆ ಪದಕ ಒಲಿದಿದೆ. ಇದಕ್ಕೂ ಮೊದಲು ರಾಜ್ಯವರ್ಧನ್ ಸಿಂಗ್ ರಾಥೋರ್(ಬೆಳ್ಳಿ , 2004ರ ಅಥೆನ್ಸ್ ಒಲಿಂಪಿಕ್ಸ್), ಅಭಿನವ್ ಬಿಂದ್ರ(ಚಿನ್ನ, 2008ರ ಬೀಜಿಂಗ್ ಒಲಿಂಪಿಕ್ಸ್), ವಿಜಯ್ ಕುಮಾರ್(ಬೆಳ್ಳಿ, 2012ರ ಲಂಡನ್ ಒಲಿಂಪಿಕ್ಸ್ ) ಹಾಗೂ ಗಗನ್ ನರಾಂಗ್(ಕಂಚು, 2012ರ ಲಂಡನ್ ಒಲಿಂಪಿಕ್ಸ್) ಪದಕ ಗೆದ್ದಿದ್ದರು.
ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕ ಲಭಿಸಿದೆ. ಹರಿಯಾಣದ ಜಜ್ಜಾರ್ನವರಾದ ಮನು ಭಾಕರ್ ವಿಶ್ವಕಪ್ನಲ್ಲಿ 9 ಚಿನ್ನ, 2 ಬೆಳ್ಳಿ, ಯುವ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.
