ಐಪಿಎಲ್ 16ನೇ ಆವೃತ್ತಿಯ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮುಗ್ಗರಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್ಗಳ ಸೋಲು ಅನುಭವಿಸಿದೆ. ಆ ಮೂಲಕ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಕ್ಯಾಪಿಟಲ್ಸ್, ಪಂಜಾಬ್ ಬೌಲರ್ಗಳ ಬೆವರಿಳಿಸಿತ್ತು. ಕೇವಲ 2 ವಿಕೆಟ್ ನಷ್ಟದಲ್ಲಿ ನಿಗದಿತ 20 ಓವರ್ಗಳಲ್ಲಿ 213 ರನ್ಗಳಿಸಿತ್ತು. ಕ್ವಾಲಿಫೈಯರ್ ಆಸೆಯನ್ನು ಜೀವಂತವಾಗಿರಿಸಿದ್ದ ಶಿಖರ್ ಧವನ್ ಪಡೆ ಡೆಲ್ಲಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಚೇಸಿಂಗ್ ವೇಳೆ ಲಿವಿಂಗ್ಸ್ಟನ್ (94*) ಮತ್ತು ಅಥರ್ವ ತೈಡೆ (55) ಹೊರತು ಪಡಿಸಿ, ಇನ್ನುಳಿದ ಬ್ಯಾಟರ್ಗಳು ತಂಡದ ನೆರವಿಗೆ ನಿಲ್ಲಲಿಲ್ಲ.
ನಾಯಕ ಶಿಖರ್ ಧವನ್ ತಾನೆದುರಿಸಿದ ಮೊದ ಎಸೆತದಲ್ಲೇ ಸ್ಲಿಪ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಪ್ರಭಾಸಿಮ್ರನ್ ಸಿಂಗ್ 22 ರನ್ಗಳಿಸಿದರು. ಬಳಿಕ ಜೊತೆಯಾದ ಲಿವಿಂಗ್ಸ್ಟನ್ ಮತ್ತು ಥೈಡೆ, ಪಂಜಾಬ್ ತಂಡಕ್ಕೆ ಆಸರೆಯಾದರು. 48 ಎಸೆತಗಳನ್ನು ಎದುರಿಸಿದ ಲಿವಿಂಗ್ಸ್ಟನ್ 9 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 94 ರನ್ಗಳಿಸಿದರೆ, ತೈಡೆ 55 ರನ್ಗಳಿಸಿದರು.
ಜಿತೇಶ್ ಶರ್ಮಾ (0), ಶಾರೂಖ್ ಖಾನ್ (6), ಸ್ಯಾಮ್ ಕರನ್ (11), ಗೆಲುವಿಗಾಗಿ ಹೋರಾಟ ಪ್ರದರ್ಶಿಸಲಿಲ್ಲ . ಅಂತಿಮವಾಗಿ 8 ವಿಕೆಟ್ ನಷ್ಟದಲ್ಲಿ 198 ರನ್ಗಳಿಸಲಷ್ಟೇ ಕಿಂಗ್ಸ್ ಶಕ್ತವಾಯಿತು. ಆ ಮೂಲಕ ಪ್ಲೇ ಆಫ್ ಅಂಚಿನಲ್ಲಿ ಪಂಜಾಬ್ ಎಡವಿದೆ.
ಟೂರ್ನಿಯಲ್ಲಿ ತನ್ನ 5ನೇ ಜಯದೊಂದಿಗೆ ಡೆಲ್ಲಿ ತಂಡ ಕೊನೇ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಕ್ಕೇರಿದರೆ, ಪಂಜಾಬ್ ಕಿಂಗ್ಸ್ 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಡೆಲ್ಲಿ ಪರ ಅಬ್ಬರಿಸಿದ ರೊಸೊವ್!
ಅಂಕ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದ ಡೆಲ್ಲಿ, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ 200 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ ಪೃಥ್ವಿ ಶಾ (54), ಡೇವಿಡ್ ವಾರ್ನರ್ (46), ರೈಲೀ ರೊಸೊವ್ (82*) ಮತ್ತು ಫಿಲಿಪ್ ಸಾಲ್ಟ್ (26*) ಪಂಜಾಬ್ ಬೌಲರ್ಗಳನ್ನು ಬಡಿದು ಬೆಂಡೆತ್ತಿದರು. ಪರಿಣಾಮ ಕ್ಯಾಪಿಟಲ್ಸ್, 20 ಓವರ್ಗಳಲ್ಲಿ 213/2 ರನ್ಗಳ ಬೃಹತ್ ಮೊತ್ತ ದಾಖಲಿಸಿತು.