ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇರಿ, ಯಾವುದಾದರು ಒಂದು ಸರನಿಯಲ್ಲಿ ಆಟವಾಡಿದರೆ ಸಾಕು ತಮ್ಮ ಇಡೀ ಜೀವನವೇ ಸೆಟಲ್ ಆಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಹಲವಾರು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಆಟವಾಡಿದರೂ, ಉತ್ತಮ ಬದುಕು ಕಟ್ಟಿಕೊಳ್ಳಲಾಗದೆ, ಮಾಡಿದ್ದ ಸಾಲ ತೀರಿಸಲು ಪೂರಿ-ಸಬ್ಜಿ ವ್ಯಾಪಾರ ಮಾಡಿರುವ ಕತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನೋಜ್ ತಿವಾರಿ ಅವರದ್ದು.
ಮನೋಜ್ ತಿವಾರಿ ಅವರು ಟೀಮ್ ಇಂಡಿಯಾದಲ್ಲಿ ಉತ್ತಮ ನೆಲೆಯನ್ನೂ ಕಂಡಿದ್ದ ಆಟಗಾರ. ಅವರು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಸೇರಿದಂತೆ ಹಲವು ಸ್ಟಾರ್ ಆಟಗಾರರೊಂದಿಗೆ ಸ್ಕ್ರೀಸ್ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲಿ 12 ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ದಿಗ್ಗಜ ಆಟಗಾರರೊಂದಿಗೆ ಕ್ರೀಸ್ ಶೇರ್ ಮಾಡಿಕೊಂಡಿದ್ದ ಮನೋಜ್ ತಿವಾರಿ ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮನೋಜ್ ತಿವಾರಿ ಭಾರತದ ಪರ 12 ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಮಾತ್ರವಲ್ಲದೆ, 2006-07ರ ರಣಜಿ ಟ್ರೋಫಿ ಸರಣಿಯಲ್ಲಿ ಬಂಗಾಳ ತಂಡವನ್ನು ಮುನ್ನಡೆಸುವ ಜೊತೆಗೆ 99.50 ಸರಾಸರಿಯಲ್ಲಿ 796 ರನ್ ಗಳಿಸಿದ್ದರು.
ಆದರೂ, ಹೆಚ್ಚು ಸಮಯ ಭಾರತೀಯ ತಂಡದಲ್ಲಿ ಉಳಿಯದ ತಿವಾರಿ, ತಮ್ಮ ಮತ್ತು ಕುಟುಂಬದ ಸಾಲವನ್ನು ತೀರಿಸಲು ಕ್ರಿಕೆಟ್ ಆಡುವುದರ ಜೊತೆಗೆ ಪೂರಿ-ಸಬ್ಜಿಯನ್ನು ಮಾರಾಟ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನೆಲ್ ಜೊತೆ ತಮ್ಮ ಜೀವನ ಬಗ್ಗೆ ಮಾತನಾಡಿರುವ ತಿವಾರಿ, ”ಅವು ಕಷ್ಟಕರ ದಿನಗಳಾಗಿದ್ದವು. ನಾನು ಸಾಲ ತೀರಿಸಬೇಕೆಂಬುದು ಯಾವಾಗಲೂ ಮನಸ್ಸಿನಲ್ಲಿತ್ತು. ಕೋಲ್ಕತ್ತಾದಲ್ಲಿ ನಮ್ಮ ಹೋಟೆಲ್ ಇದೆ. ಅಲ್ಲಿ ನಾನು ಪೂರಿ-ಸಬ್ಜಿ ಮಾರಾಟ ಮಾಡುತ್ತಿದ್ದೆ. ಕೆಲವೊಮ್ಮೆ ಜನರು ಆಹಾರ ತಿಂದು, ಹಣ ಕೊಡದೆ ಹೋಗಿಬಿಡುತ್ತಿದ್ದರು” ಎಂದು ಹೇಳಿಕೊಂಡಿದ್ದಾರೆ.