ಐಸಿಸಿ ಏಕದಿನ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಮೋಘ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಾಣರಾದ ನ್ಯೂಜಿಲೆಂಡ್‌ನ ಉದಯೋನ್ಮುಖ ಆಟಗಾರ ರಚಿನ್ ರವೀಂದ್ರ ಪಂದ್ಯ ಗೆಲುವು ಸಾಧಿಸಿದ ನಂತರ ತಮ್ಮ ಪೂರ್ವಜರ ನಾಡು ಬೆಂಗಳೂರಿನ ಬಗ್ಗೆ ಮೆಲುಕು ಹಾಕಿದರು.
ಮಾಧ್ಯಮವೊಂದರ ಜೊತೆ ಮಾತನಾಡಿದ ರಚಿನ್, ವಿಶ್ವಕಪ್‌ನಲ್ಲಿ ಅವಕಾಶ ನೀಡಿದ್ದಕ್ಕೆ ಖಂಡಿತಾ ನನಗೆ ಸಂತೋಷವಾಗುತ್ತದೆ. ನನ್ನ ಆಟದ ಬಗ್ಗೆ ಆಟಗಾರರು ಹಾಗೂ ಪ್ರೇಕ್ಷಕರು ಪ್ರೋತ್ಸಾಹ ನೀಡಿದ್ದಕ್ಕೆ ಖುಷಿ ಆಗುತ್ತಿದೆ. ಪೂರ್ಣ ಟೂರ್ನಮೆಂಟ್‌ನಲ್ಲೂ ಇದೇ ರೀತಿಯ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದರು.
“ಇಂಗ್ಲೆಂಡ್ ಚಾಂಪಿಯನ್ ಹಾಗೂ ಪ್ರಬಲ ತಂಡವಾಗಿದ್ದು, ನಾವು ಆ ತಂಡದ ವಿರುದ್ಧ ಗೆದ್ದಿದ್ದಕ್ಕೆ ಹೆಮ್ಮೆಯಿದೆ. ಕೆಲವು ಬಾರಿ ನಾವು ಮೇಲುಗೈ ಸಾಧಿಸಿದರೆ, ಇನ್ನುಳಿದ ಸಂದರ್ಭದಲ್ಲಿ ಇಂಗ್ಲೆಂಡ್ ಜಯ ಸಾಧಿಸುತ್ತದೆ. ನನಗೆ ಸೂಪರ್ ಸ್ಟಾರ್ ಆಟಗಾರ ಆಗುವ ಆಸೆಯಿಲ್ಲ. ತಂಡದ ಆಟಗಾರನಾಗಿ ನನ್ನ ಆಟವನ್ನು ಆಡುತ್ತೇನೆ. ತಂಡದಲ್ಲಿ ಕೇನ್ ವಿಲಿಯಮ್ಸ್‌ನ್ ಹಾಗೂ ಟಾಮ್ ಲಾಥಂ ಅವರಂಥ ಆಟಗಾರರು ಸೂಪರ್ ಸ್ಟಾರ್ ಆಟಗಾರರಾಗಿದ್ದಾರೆ. ನಾನು ಬೆಂಗಳೂರಿಗೆ ಬಂದಾಗ ನನ್ನ ಪುರ್ವಜರಾದ ಅಜ್ಜ-ಅಜ್ಜಿಯವರ ಮನೆಗೆ ಭೇಟಿ ನೀಡುತ್ತೇನೆ. ಇಲ್ಲಿನ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ” ಎಂದು ರಚಿನ್ ರವೀಂದ್ರ ಹೇಳಿದರು.
ಬೆಂಗಳೂರಿಗೂ ತಮಗೂ ಇರುವ ನಂಟಿನ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ ಹೇಳಿದ್ದು ಹೀಗೆ 💛❤️#CricketWorldCup #WorldCupOnStar #CWC23 #RachinRavindra pic.twitter.com/BISdlnw8VN
— Star Sports Kannada (@StarSportsKan) October 6, 2023
ಮೂಲತಃ ಬೆಂಗಳೂರಿನವರಾದ ರಚಿನ್ ರವೀಂದ್ರ ಅವರ ಪೋಷಕರು 90 ರ ದಶಕದಲ್ಲಿ ಕೆಲಸದ ನಿಮಿತ್ತ ನ್ಯೂಜಿಲೆಂಡ್‌ಗೆ ತೆರಳಿ ಸದ್ಯ ಅಲ್ಲಿನ ನಾಗರಿಕರಾಗಿದ್ದಾರೆ.
ನವೆಂಬರ್ 4ನೇ ತಾರೀಖಿನಂದು ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ಆಡಲಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ(ಅ.05) ಇಂಗ್ಲೆಂಡ್ ವಿರುದ್ಧ ಕಿವೀಸ್ ತಂಡ 9 ವಿಕೆಟ್‌ಗಳ ಜಯ ಸಾಧಿಸಿತ್ತು.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಕನ್ನಡಿಗ ರಚಿನ್ ರವೀಂದ್ರ ಶತಕ ವೈಭವ; ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು
ಮೊದಲ ಕ್ರಮಾಂಕದಲ್ಲಿ ಬಂದು ಆಟವಾಡಿದ್ದ ರಚಿನ್ ರವೀಂದ್ರ 96 ಚೆಂಡುಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳು ಹಾಗೂ 11 ಬೌಂಡರಿಗಳೊಂದಿಗೆ 123ರನ್ ಬಾರಿಸಿ ಅಜೇಯರಾಗಿ ಉಳಿದರು. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಪುರಸ್ಕಾರಕ್ಕೂ ಭಾಜನರಾಗಿದ್ದರು. ಬೌಲಿಂಗ್‌ನಲ್ಲೂ ಕೂಡ ಒಂದು ವಿಕೆಟ್ ಕಬಳಿಸಿ ಯಶಸ್ವಿಯಾಗಿದ್ದರು.
ರಚಿನ್‌ಗೆ ಉತ್ತಮ ಜೊತೆಯಾಟ ನೀಡಿದ ಡೆವೊನ್ ಕಾನ್ವೇ 121 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 19 ಬೌಂಡರಿಗಳೊಂದಿಗೆ 152 ರನ್ ಪೇರಿಸಿ ಅಜೇಯರಾದರು. ಇವರಿಬ್ಬರು ಮುರಿಯದ ಎರಡನೇ ವಿಕೆಟ್ ಜೊತೆಯಾಟಕ್ಕೆ 272 ರನ್ ಕಲೆ ಹಾಕಿದರು.
ಇಂಗ್ಲೆಂಡ್ ನೀಡಿದ್ದ 283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 36.2 ಓವರ್‌ಗಳಲ್ಲಿ ಜಯ ತನ್ನದಾಗಿಸಿಕೊಂಡಿತು.