ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿನ್ನೆಯಷ್ಟೆ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ವೆಸ್ಟ್ ಇಂಡೀಸ್‌ನ ಬರ್‌ಬೊಡೊಸ್‌ನ ಕೆನ್ಸಿಂಗ್‌ಟನ್ ಓವಲ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಅಫ್ರಿಕಾವನ್ನು 7 ರನ್‌ಗಳಿಂದ ಮಣಿಸಿ ಎರಡನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ ‘ಚಾಂಪಿಯನ್’
“ಹೃದಯ ಪೂರ್ವಕ ಕೃತಜ್ಞತೆಯೊಂದಿಗೆ, ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದೇನೆ. ಸದೃಢ ಕುದುರೆ ಹೆಮ್ಮೆಯಿಂದ ಓಡುತ್ತಿರುವಂತೆ, ನಾನು ನನ್ನ ದೇಶಕ್ಕೆ ಯಾವಾಗಲು ಉತ್ತಮವಾದುದದನ್ನೇ ನೀಡಿದ್ದು,ಮುಂದೆಯೂ ಇತರ ಮಾದರಿಗಳಲ್ಲಿಯೂ ಅದನ್ನೇ ಮುಂದುವರಿಸುತ್ತೇನೆ. ನನ್ನ ಟಿ20 ಅಂತಾರಾಷ್ಟ್ರೀಯ ವೃತ್ತಿಯ ಶಿಖರದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಕನಸು ನನಸಾಗಿದೆ. ನೆನಪುಗಳು, ಸಂತೋಷಗಳು ಹಾಗೂ ಅಚಲ ಬೆಂಬಲ ನೀಡಿದಕ್ಕೆ ಧನ್ಯವಾದಗಳು” ಎಂದು ರವೀಂದ್ರ ಜಡೇಜಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
36 ವರ್ಷದ ರವೀಂದ್ರ ಜಡೇಜಾ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಯಲ್ಲಿ 2009ರಿಂದ 2024ರವರೆಗೆ ಒಟ್ಟು 74 ಪಂದ್ಯಗಳಲ್ಲಿ 41 ಇನಿಂಗ್ಸ್ ಆಡಿದ್ದು ಬ್ಯಾಟಿಂಗ್‌ನಲ್ಲಿ ಒಟ್ಟು 515 ರನ್ ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 46. ಬೌಲಿಂಗ್‌ನಲ್ಲಿ 71 ಇನಿಂಗ್ಸ್‌ಗಳಿಂದ 54 ವಿಕೆಟ್ ಕಬಳಿಸಿದ್ದು 3/15 ಅವರ ಅತ್ಯುತ್ತಮ ಬೌಲಿಂಗ್ . ಕ್ಷೇತ್ರ ರಕ್ಷಣೆಯಲ್ಲಿ 28 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.
