ಐಪಿಎಲ್‌ನ 2025ರ ಸೀಸನ್‌ನಲ್ಲಿ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಲ್ಲಿ ಗೆಲುವಿನ ಲಯಕ್ಕೆ ಮರಳಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 11 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ತವರಲ್ಲಿ ಮೊದಲ ಜಯ ಗಳಿಸಿದೆ. ಆ ಮೂಲಕ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ತ್ ಪಡಿಕ್ಕಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ 205 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್, ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ ಕೊನೆಯ ಐದು ಓವರುಗಳಲ್ಲಿ ಉತ್ತಮ ಬೌಲಿಂಗ್ ನಡೆಸಿದ ಜೋಶ್ ಹೇಝಲ್‌ವುಡ್ ಆರ್‌ಸಿಬಿ 11 ರನ್‌ಗಳ ಅಂತರದಿಂದ ಗೆಲ್ಲಲು ನೆರವಾದರು.
