ಐಪಿಎಲ್ 18 ನೇ ಆವೃತ್ತಿಯ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ಎರಡೂ ತಂಡಗಳು ಗೆಲುವಿನ ಓಟವನ್ನು ಕಾಯ್ದುಕೊಳ್ಳುವ ಮತ್ತು ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ ಕಣಕ್ಕಿಳಿಯಲಿವೆ.
ಈ ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳನ್ನು ಮಣಿಸಿ ಗೆಲುವಿನೊಂದಿಗೆ ಮುನ್ನುಗ್ಗುತ್ತಿವೆ. ಹೀಗಾಗಿ ಅಜೇಯ ಓಟವನ್ನು ಮುಂದುವರೆಸುವ ಇರಾದೆ ಈ ಎರಡೂ ತಂಡಗಳಿಗಿದೆ. ಆದಾಗ್ಯೂ ಈ ಪಂದ್ಯ ರದ್ದಾಗುವ ಆತಂಕ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ.
ಉದ್ಯಾನ ನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ನಾಳಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಇದೀಗ ಹವಾಮಾನ ಇಲಾಖೆಯಿಂದ ನಾಳಿನ ಹವಾಮಾನ ವರದಿ ಹೊರಬಿದ್ದಿದ್ದು, ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ಹವಾಮಾನವು ಬಿಸಿಲಿನಿಂದ ಕೂಡಿದ್ದು, ಭಾಗಶಃ ಮೋಡ ಕವಿದಿರುತ್ತದೆ. ಈ ದಿನ ಲಘು ಮಳೆಯಾಗುವ ನಿರೀಕ್ಷೆಯಿದ್ದು, ದಿನವಿಡೀ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಹಗಲಿನಲ್ಲಿ ಗರಿಷ್ಠ ತಾಪಮಾನವು ಸುಮಾರು 34 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆಗೆ ತಾಪಮಾನ 22 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ವಂಚಿಸಲು ಹೋಗಿ ಅಂಪೈರ್ ಕೈಗೆ ಸಿಕ್ಕಿಬಿದ್ದ ಸುನಿಲ್ ನರೈನ್, ಎನ್ರಿಕ್ ನೋಕಿಯಾ!
ಈ ನಡುವೆಯೂ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆ ಸಾಕಷ್ಟು ಉತ್ತಮವಾಗಿರುವ ಕಾರಣ ಎಷ್ಟೇ ಮಳೆ ಬಿದ್ದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಂಪೂರ್ಣವಾಗಿ ಆಟಕ್ಕೆ ಸಿದ್ದಗೊಳಿಸಬಹುದು. ಮಳೆ ನಿಂತ ಬಳಿಕ ಆಟವನ್ನು ಪುನರಾರಂಭಿಸಲು 30 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಮಳೆ ಬಂದರೂ ಪಂದ್ಯದ ವೇಳೆಗೆ ನಿಲ್ಲಲಿ ಎಂಬುದು ಆರ್ಸಿಬಿ ಅಭಿಮಾನಿಗಳ ಆಶಯವಾಗಿದೆ.
ಉಭಯ ತಂಡಗಳ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್(ನಾಯಕ), ಯಶ್ ದಯಾಳ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಜೋಶ್ ಹೇಜಲ್ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ದೇವದತ್ತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎನ್ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ಪಂಜಾಬ್ ಕಿಂಗ್ಸ್:
ಶಶಾಂಕ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ನೆಹಾಲ್ ವಧೇರಾ, ವಿಷ್ಣು ವಿನೋದ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಯುಜ್ವೇಂದ್ರ ಚಹಾಲ್, ಹರ್ಪ್ರೀತ್ ಬ್ರಾರ್, ಅರ್ಷ್ದೀಪ್ ಸಿಂಗ್, ವಿಜಯ್ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಪ್ರಿಯಾಂಶ್ ಆರ್ಯ, ಅಜ್ಮತುಲ್ಲಾ ಒಮರ್ಜಾಯ್, ಆರನ್ ಹಾರ್ಡಿ, ಕ್ಸೇವಿಯರ್ ಬಾರ್ಟ್ಲೆಟ್, ಕುಲದೀಪ್ ಸೇನ್, ಸೂರ್ಯಾಂಶ್ ಶೆಡ್ಜ್, ಮುಶೀರ್ ಖಾನ್, ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರವೀಣ್ ದುಬೆ.
ಪಂದ್ಯ ಆರಂಭವಾಗುವ ಸಮಯ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್ ಸ್ಟಾರ್