ಐಪಿಎಲ್ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಇದುವರೆಗೆ ಆರ್‍ಸಿಬಿ ತವರಿನಲ್ಲಿ ಆಡಿದ ಮೂರು ಪಂದ್ಯಗಳನ್ನು ಸೋತಿದೆ. ಹೀಗಾಗಿ ಈ ಪಂದ್ಯ ರೋಚಕತೆ ಪಡೆದಿದೆ.
ಜೈಪುರದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್‍ಸಿಬಿ 9 ವಿಕೆಟ್‌ಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಅದ್ಭುತ ಗೆಲುವು ದಾಖಲಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ ರಾಜಸ್ಥಾನ ವಿರುದ್ಧ ಆರ್‍ಸಿಬಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಕಳೆದ ಪಂದ್ಯದ ಸೋಲಿಗೆ ರಾಜಸ್ಥಾನ ತಂಡ ಕೂಡ ಸೇಡು ತಿರಿಸಿಕೊಳ್ಳಲು ಸಜ್ಜಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಇಲ್ಲಿವರೆಗೆ ಉತ್ತಮವಾಗಿದೆ. ತಂಡದ ಏಕೈಕ ಚಿಂತೆಯೆಂದರೆ ತವರಿನಲ್ಲಿ ಗೆಲುವು ಕಾಣದಿರುವುದು. ಐಪಿಎಲ್ 2025 ರಲ್ಲಿ ಆರ್‍ಸಿಬಿ 8 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಜಯಗಳಿಸಿದೆ. ಈ ಎಲ್ಲ ವಿಜಯಗಳು ತವರಿನ ಹೊರಗೆ ದೊರಕಿವೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡದ ಪ್ರದರ್ಶನ ತವರು ಮತ್ತು ಹೊರಗೆ ಎರಡರಲ್ಲೂ ಉತ್ತಮವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಐಪಿಎಲ್‌ನಲ್ಲಿ ಕೆ ಎಲ್ ರಾಹುಲ್ ದಾಖಲೆ ಮುರಿದ ಶುಭಮನ್ ಗಿಲ್
ರಾಜಸ್ಥಾನ ಇದುವರೆಗೆ 8 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆದ್ದಿದ್ದು, 6 ರಲ್ಲಿ ಸೋಲನ್ನು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಇದು ತಂಡಕ್ಕೆ ಹಿನ್ನಡೆ ಉಂಟು ಮಾಡಲಿದೆ. ಕಳೆದ ಎರಡು ಪಂದ್ಯಗಳಲ್ಲಿ ರಾಜಸ್ಥಾನ ಕೊನೆಯ ಓವರ್‍ಗಳಲ್ಲಿ ಸೋತಿದೆ. ಆರ್‍ಸಿಬಿ ಒಂದು ಪಂದ್ಯವನ್ನು ಸೋತು ಇನ್ನೊಂದರಲ್ಲಿ ಗೆಲುವು ಸಾಧಿಸಿದೆ.
ಐಪಿಎಲ್ ಇತಿಹಾಸದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ತೀವ್ರ ಪೈಪೋಟಿ ನಡೆದಿವೆ. ಆದಾಗ್ಯೂ, ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಒಟ್ಟು 33 ಪಂದ್ಯಗಳು ನಡೆದಿವೆ. ಇದರಲ್ಲಿ ಬೆಂಗಳೂರು 16 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ರಲ್ಲಿ ಜಯ ಕಂಡಿದೆ. 3 ಪಂದ್ಯಗಳು ಯಾವುದೇ ಫಲಿತಾಂಶ ಬಂದಿಲ್ಲ.
ಇತ್ತೀಚಿನ ದಿನಗಳಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬದಲಾಗಿದೆ. ಮೊದಲು ಈ ಪಿಚ್‌ನಲ್ಲಿ ಬಿಗ್ ಸ್ಕೋರ್ ಪಂದ್ಯಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪಿಚ್ ಬೌಲರ್ಸ್‌ಗೆ ಹೆಚ್ಚು ಅನುಕೂಲವಾಗಿದೆ. ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಸೂಕ್ತವಾಗಿದೆ. ಈ ಪಿಚ್‌ನಲ್ಲಿ 175 ಕ್ಕಿಂತ ಹೆಚ್ಚಿನ ರನ್‌ಗಳನ್ನು ಉತ್ತಮ ಮೊತ್ತವೆಂದು ಪರಿಗಣಿಸಬಹುದು.
ಉಭಯ ತಂಡಗಳ ಬಳಗ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ರಾಜಸ್ಥಾನ ರಾಯಲ್ಸ್: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ.
ಪಂದ್ಯದ ಸಮಯ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್