ಗುಜರಾತಿನ ಅಹಮದಾಬಾದಿನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕವಾಗಿ ಸೋಲಿಸುವ ಮೂಲಕ 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವು ಫೈನಲ್ ಪ್ರವೇಶಿಸಿದೆ.
ಗೆಲ್ಲಲು 204 ರನ್‌ಗಳ ಗುರಿಯನ್ನು ಪಡೆದಿದ್ದ ಪಂಜಾಬ್ ತಂಡವು, ನಾಯಕ ಶ್ರೇಯಸ್ ಅಯ್ಯರ್ ಅವರ ಸಮಯೋಚಿತ ಅರ್ಧ ಶತಕದ(87 ರನ್ ಔಟಾಗದೆ) ನೆರವಿನಿಂದ ಐದು ವಿಕೆಟ್‌ಗಳ ರೋಚಕ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 203 ರನ್ ಗಳಿಸಲು ಶಕ್ತವಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್, 19 ಓವರ್‌ಗಳಲ್ಲಿ ಈ ಗುರಿ ತಲುಪುವ ಮೂಲಕ ರೋಚಕ ಜಯ ಗಳಿಸಿತು.
ಬಾಲಿವುಡ್ ನಟಿ ಪ್ರೀತಿ ಝಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡವು 2014ರಲ್ಲಿ ಫೈನಲ್ ತಲುಪಿತ್ತಾದರೂ ಕೋಲ್ಕತ್ತಾ ವಿರುದ್ಧ ಸೋತಿತ್ತು. ಆ ಬಳಿಕ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಜೂನ್ 3 ರಂದು ಅಹಮದಾಬಾದಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಂಜಾಬ್ ಎದುರಿಸಲಿದೆ. ಆ ಮೂಲಕ 2025ರಲ್ಲಿ ನಡೆಯುತ್ತಿರುವ 18ನೇ ಆವೃತ್ತಿಯಲ್ಲಿ ಹೊಸ ತಂಡವು ಚಾಂಪಿಯನ್ ಪಟ್ಟಕ್ಕೆ ಏರಲಿದೆ.
