ಚಾಂಪಿಯನ್ಸ್ ಟ್ರೋಫಿ ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ.
ದುಬೈ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ ಅವರು ಪಂತ್‌ಗೆ ಚೆಂಡು ಎಸೆಯತ್ತಿದ್ದರು. ಈ ವೇಳೆ ಚೆಂಡು ಪಂತ್ ಅವರ ಎಡ ಮೊಣಕಾಲಿಗೆ ಬಡಿದಿದೆ. ಪೆಟ್ಟು ಬಿದ್ದ ನಂತರ ಪಂತ್ ಕುಂಟುತ್ತಾ ನಡೆದಿದ್ದಾರೆ.
ವೈದ್ಯಕೀಯ ಆರೈಕೆಯ ನಂತರ ಪಂತ್ ಮೊಣಕಾಲಿನ ಪಟ್ಟಿಯೊಂದಿಗೆ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ. 2022 ರಲ್ಲಿ ರಿಷಭ್ ಪಂತ್ ಅವರ ಕಾರು ಭೀಕರ ಅಪಘಾತವಾಗಿದ್ದು. ಈ ಸಂದರ್ಭದಲ್ಲಿ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿತ್ತು. ಪಂತ್ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದಾರೆ. ಭಾರತವು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ.
ಭಾರತವು ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. 2002 ರಲ್ಲಿ ಶ್ರೀಲಂಕಾದ ಜೊತೆ ಜಂಟಿಯಾಗಿ ಜಯಗಳಿಸಿದ್ದರೆ 2013 ರಲ್ಲಿ ಆತಿಥೇಯ ಇಂಗ್ಲೆಂಡ್ ಅನ್ನು 5 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ರಿಷಭ್ ಪಂತ್ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ರಿಷಭ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದರೆ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪಂತ್ ಭಾರತ ತಂಡದಲ್ಲಿ ಪರಿಣಿತ ವಿಕೆಟ್ ಕೀಪರ್ ಆಗಿ ಸೇರ್ಪಡೆಗೊಂಡ ಏಕೈಕ ವಿಕೆಟ್ ಕೀಪರ್. ಅವರು ಹೊರಗುಳಿದರೆ, ಬದಲಿ ವಿಕೆಟ್‌ಕೀಪರ್ ಯಾರು? ಎಂಬುದು ಪ್ರಶ್ನೆ ಆಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
15 ಸದಸ್ಯರ ಭಾರತ ತಂಡದಲ್ಲಿ ಕೆ ಎಲ್ ರಾಹುಲ್ ಜೊತೆಗೆ ಪಂತ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಕೆ ಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುವ ಹನ್ನೊಂದರ ಬಳಗದಲ್ಲಿ ಆಡಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಇದೀಗ ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಬಾಗಿಲು ತೆರೆಯಬಹುದು ಎನ್ನಲಾಗುತ್ತಿದೆ.
ಸಂಜು ಭಾರತದ ಟಿ20 ತಂಡದ ಭಾಗವಾಗಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಂಜು ಇತ್ತೀಚಿಗೆ ಬೆರಳಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಹೀಗಾಗಿ ಸಂಜು ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧ್ರುವ್ ಜುರೆಲ್ ಟೀಮ್ ಇಂಡಿಯಾ ಸೇರಬಹುದು ಎನ್ನಲಾಗುತ್ತಿದೆ.
ಧ್ರುವ್ ಜುರೆಲ್ ಟೀಮ್ ಇಂಡಿಯಾ ಪರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದರು. ಒಂದು ವೇಳೆ ರಿಷಬ್ ಪಂತ್ ಗಾಯದ ಪರಿಣಾಮ ಹೊರಗುಳಿದರೆ, ಧ್ರುವ್ ಜುರೆಲ್ ಟೀಮ್ ಇಂಡಿಯಾ ಸೇರುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೊಫಿ ಆಡುವ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ.
