ಭಾರತೀಯ ಕ್ರಿಕೆಟ್‌ನ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರು ಬಿಸಿಸಿಐದ ಉನ್ನತ ಅಧಿಕಾರಿಗಳು ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇತ್ತೀಚೆಗೆ ಕ್ರಿಕೆಟ್ ಟೂರ್ನಿಗಳ ಫಲಿತಾಂಶಗಳು, ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ (1-3) ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲೇ 0-3 ಅಂತರದ ಹೀನಾಯ ಸೋಲಿನ ಬಗ್ಗೆ ಚರ್ಚೆಗಳು ನಡೆದಿವೆ. ಸಭೆಯಲ್ಲಿ, ಇನ್ನೂ ಕೆಲವು ‘ತಿಂಗಳು’ ತಂಡದ ನಾಯಕನಾಗಿ ಉಳಿಯುವ ಉದ್ದೇಶವನ್ನು ವ್ಯಕ್ತಪಡಿಸಿರುವ ರೋಹಿತ್, ಶೀಘ್ರದಲ್ಲೇ ತಂಡದ ನಾಯಕತ್ವ ತೊರೆಯುವ ಮುನ್ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಡೆಯುತ್ತಿದ್ದ ಸಮಯದಲ್ಲಿ, ಟೆಸ್ಟ್ ತಂಡದಲ್ಲಿ ರೋಹಿತ್ ಅವರ ಭವಿಷ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ತೀವ್ರಗೊಂಡಿದ್ದವು. ವಿಶೇಷವಾಗಿ ಅವರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬುದು ಕಾಣಿಸುತ್ತಿತ್ತು. ಪರಿಣಾಮ, ಸರಣಿಯ ಅಂತಿಮ ಪಂದ್ಯದಿಂದ ರೋಹಿತ್ ಹೊರಗುಳಿಯಲು ನಿರ್ಧರಿಸಿದರು. ಆದರೂ, ಭಾರತ ತಂಡ ಆ ಪಂದ್ಯವನ್ನೂ ಸೋತಿತು.
ಬಿಸಿಸಿಐ ಜೊತೆಗಿನ ಸಭೆಯಲ್ಲಿ, ಅಗರ್ಕರ್ ಮತ್ತು ಗಂಭೀರ್ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರು ಇನ್ನೂ ಕೆಲವು ತಿಂಗಳು ತಂಡದ ನಾಯಕನಾಗಿ ಮುಂದುವರೆಯುವ ಇಚ್ಛೆ ಹೊಂದಿದ್ದಾರೆ. ಜೊತೆಗೆ, ಹೊಸ ನಾಯಕನ ಆಯ್ಕೆಗಾಗಿ ಪ್ರಕ್ರಿಯೆಗಳನ್ನು ಮುಂದುವೆಸುವಂತೆ ರೋಹಿತ್ ಬಿಸಿಸಿಐಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ಭಾರತದ ನಾಯಕನಾಗಿ ತಂಡವನ್ನು ಮುನ್ನಡೆಸಲು ಬಯಸಿದ್ದಾರೆ. ಆ ಬಳಿಕ, ಅವರು ನಾಯಕತ್ವ ತೊರೆಯುವ ಸಾಧ್ಯತೆ ಇದೆ.
ಈ ವರದಿ ಓದಿದ್ದೀರಾ?: ‘ಹಿಂದುತ್ವ ಮೊದಲು – ಜಾತಿ ನಂತರ’: ಏನಿದು ಬಿಜೆಪಿಯ ‘ಹೈಂದವ ಸಂಖಾರವಂ’?
ವರದಿಗಳ ಪ್ರಕಾರ, ರೋಹಿತ್ ನಂತರದ ನಾಯಕತ್ವಕ್ಕೆ ಬುಮ್ರಾ ವರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಆದರೆ, ಅವರ ವಿಚಾರದಲ್ಲಿ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಅವರು ಟೆಸ್ಟ್ ಸರಣಿಗಳಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದು ಹಲವರಲ್ಲಿ ಪ್ರಶ್ನೆಯಾಗಿ ಉಳಿದಿದೆ.
ಬುಮ್ರಾ ಕೂಡ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಎಲ್ಲ 5 ಪಂದ್ಯಗಳ ಪೈಕಿ, 2 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಅವರಿಗೂ ಬೆನ್ನುನೋವು ಎದುರಾಗಿತ್ತು. ಹೀಗಾಗಿ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಬೌಲಿಂಗ್ ಕೂಡ ಮಾಡಲಿಲ್ಲ.
ಭಾರತದ ಉತ್ತಮ ವೇಗಿ ಬೌಲರ್ ಈ ರೀತಿಯ ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿರುವುದು ದೀರ್ಘಾವಧಿಯ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಾಧ್ಯವೇ ಎಂಬ ಬಗ್ಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.