ನೂತನವಾಗಿ ನೇಮಕವಾಗಿರುವ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಭವಿಷ್ಯದ ಊಹಾಪೋಹಗಳ ಬಗ್ಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ ಇಬ್ಬರು ಆಟಗಾರರು ಟಿ20 ವಿಶ್ವಕಪ್ ಅಥವಾ ಏಕದಿನ ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಏನು ನೀಡಬೇಕೊ ಎಂಬುದನ್ನು ತೋರ್ಪಡಿಸಿದ್ದಾರೆ. ಒಂದು ವಿಷಯವನ್ನು ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. ಇಬ್ಬರು ಆಟಗಾರರಲ್ಲಿ ಸಾಕಷ್ಟು ಕ್ರಿಕೆಟ್ ಸಾಮರ್ಥ್ಯ ಉಳಿದಿದೆ. ಇನ್ನು ಮುಖ್ಯವಾಗಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ ಹಾಗೂ ಆಸ್ಟ್ರೇಲಿಯದ ಪ್ರಮುಖವಾದ ಪ್ರವಾಸವಿದೆ. ಅವರಿಂದ ಪ್ರೇರಿಪಿಸಲ್ಪಡುವುದು ಸಾಕಷ್ಟಿದೆ. ಆಶಾದಾಯಕವಾಗಿ ಹೇಳುವುದಾದರೆ, ಇಬ್ಬರು ಆಟಗಾರರು ಫಿಟ್‌ನೆಟ್ ಕಾಯ್ದುಕೊಳ್ಳಲು ಸಾಧ್ಯವಾದರೆ, 2027ರ ವಿಶ್ವಕಪ್‌ವರೆಗೆ ಅವರು ಇರುತ್ತಾರೆ” ಎಂದು ಹೇಳಿದರು.
“ಇದು ತುಂಬ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂಬುದನ್ನು ನಾನು ಹೇಳಲಾರೆ. ಅಂತಿಮವಾಗಿ ಇದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ಅವರು ನಿರ್ಧರಿಸಬೇಕು. ವಿರಾಟ್ ಹಾಗೂ ರೋಹಿತ್ ಏನು ಕೊಡುಗೆ ನೀಡುತ್ತಾರೆ ಎಂಬುದನ್ನು ನೋಡುವುದಾದರೆ, ಅವರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ವಿಶ್ವ ದರ್ಜೆಯ ಆಟಗಾರರು. ಯಾವುದೇ ತಂಡ ಕೂಡ ಇಂತಹ ಆಟಗಾರರನ್ನು ಸಾಧ್ಯವಾದಷ್ಟು ಕಾಲ ತನ್ನಲ್ಲಿ ಇಟ್ಟುಕೊಳ್ಳುತ್ತದೆ” ಎಂದು ಗೌತಮ್ ಗಂಭೀರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ
“ಜಸ್‌ಪ್ರೀತ್ ಬುಮ್ರಾ ರೀತಿಯ ಕೆಲವೊಬ್ಬರ ಕಾರ್ಯನಿರ್ವಹಣೆಗೆ ಬಂದರೆ ಅವರು ಮುಖ್ಯವಾಗುತ್ತಾರೆ. ರೋಹಿತ್, ವಿರಾಟ್ ಟಿ20ಗಳಲ್ಲಿ ಆಡುತ್ತಿಲ್ಲ. ಹಾಗಾಗಿ ಅವರ ಮುಂದಿನ ಬಹುತೇಕ ಪ್ರಮುಖ ಪಂದ್ಯಗಳಲ್ಲಿ ಅವರ ಲಭ್ಯತೆಯಿದೆ. ಬ್ಯಾಟರ್‌ಗಳಾಗಿ ಒಳ್ಳೆಯ ಫಾರ್ಮ್‌ನಲ್ಲಿ ಉತ್ತಮ ಆಟವನ್ನು ಆಡಿದರೆ ಎಲ್ಲ ಆವೃತ್ತಿಗಳಲ್ಲೂ ಉತ್ತಮವಾಗಿ ಆಡುತ್ತಾರೆ. ಕೇವಲ ಬುಮ್ರಾ ಮಾತ್ರವಲ್ಲ ಬಹುತೇಕ ಬೌಲರ್‌ಗಳು ಕಾರ್ಯನಿರ್ವಹಣೆ ಮುಖ್ಯವಾದುದು” ಎಂದು ಹೇಳಿದ್ದಾರೆ.
ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್, ಕೊಹ್ಲಿ ಟಿ20 ಆವೃತ್ತಿಗೆ ವಿದಾಯ ಹೇಳಿದ್ದಾರೆ. ಈಗ ಇಬ್ಬರು ಆಟಗಾರರು ಏಕದಿನ ಹಾಗೂ ಟೆಸ್ಟ್‌ನಲ್ಲಿ ಮುಂದುವರಿಯಲಿದ್ದಾರೆ.
37 ವರ್ಷದ ರೋಹಿತ್ 2027ರ ವಿಶ್ವಕಪ್ ವೇಳೆಗೆ 41 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿಗೆ ಆ ವೇಳೆಗಾಗಲೆ 38 ವರ್ಷ ದಾಟಿರುತ್ತದೆ.
ಮುಂದಿನ ವರ್ಷದವರೆಗೂ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ರೋಹಿತ್ ಅವರನ್ನೆ ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಟಿ20 ಆವೃತ್ತಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನೇಮಿಸಲಾಗಿದೆ.
ಸಹಾಯಕ ಕೋಚ್‌ಗಳಾಗಿ ಅಭಿಷೇಕ್ ನಾಯರ್ ಹಾಗೂ ಟೆನ್ ಡೋಸ್‌ಚಾಟೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾ ಸರಣಿಗೆ ಟಿ ದಿಲೀಪ್ ಹಾಗೂ ಸಾಯಿರಾಜ್ ಬಹುತುಲೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ಇರಲಿದ್ದಾರೆ ಎಂದು ಗಂಭೀರ್ ತಿಳಿಸಿದ್ದಾರೆ.