ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಸತತ ವೈಫಲ್ಯ ಕಾಣುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೂ ಲಖನೌ ಪರವಾಗಿ 9 ಇನಿಂಗ್ಸ್‌ಗಳನ್ನು ಆಟವಾಡಿದ್ದು ರಿಷಭ್ ಪಂತ್ ಅವರಿಂದ ಒಂದೇ ಉತ್ತಮ ಇನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಏಕಾನಾ ಸ್ಟೇಡಿಯಂನಲ್ಲಿ ನಡೆದ ನಿನ್ನೆ(ಏ.22) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಶೂನ್ಯಕ್ಕೆ ಔಟಾಗಿದ್ದಾರೆ.
ರಿಷಭ್ ಪಂತ್ ಐಪಿಎಲ್ 2025 ಆವೃತ್ತಿಯಲ್ಲಿ ತಮ್ಮ ಮಾಜಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶೂನ್ಯಕ್ಕೆ ಔಟಾಗಿರುವುದು ಇದು ಎರಡನೇ ಬಾರಿ. ರಿಷಭ್ ಪಂತ್ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 7 ಬಾರಿ ಬ್ಯಾಟಿಂಗ್ ಮಾಡಿದ್ದು, ಒಟ್ಟು 106 ರನ್ ಗಳಿಸಿದ್ದಾರೆ. ಸತತ ಅವಕಾಶಗಳು ಸಿಕ್ಕರೂ ಅವರು ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ರಿಷಭ್ ಪಂತ್ ಈ ಹಿಂದೆ 8 ಆವೃತ್ತಿಗಳ ಐಪಿಎಲ್‌ನಲ್ಲಿ ಡೆಲ್ಲಿ ತಂಡದೊಂದಿಗೆ ಇದ್ದರು. ಅವರು ಡೆಲ್ಲಿ ಪರ 111 ಪಂದ್ಯಗಳಲ್ಲಿ 3284 ರನ್ ಗಳಿಸಿದ್ದಾರೆ.
ಈ ಅವಧಿಯಲ್ಲಿ ಅವರು 1 ಶತಕ ಮತ್ತು 18 ಅರ್ಧಶತಕಗಳನ್ನು ಗಳಿಸಿದರು. ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿಗೂ ಮುನ್ನ, ಡೆಲ್ಲಿ ಮ್ಯಾನೇಜ್‌ಮೆಂಟ್ ಮತ್ತು ಪಂತ್ ನಡುವಿನ ಮಾತುಕತೆ ಯಾವುದೇ ತೀರ್ಮಾನಕ್ಕೆ ಬರದಿದ್ದಾಗ, ತಂಡವು ಅವರನ್ನು ಬಿಡುಗಡೆ ಮಾಡಿತು. ಅವರು ಮೆಗಾ ಹರಾಜಿನಲ್ಲಿ ಭಾಗವಹಿಸಿದರು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಅವರನ್ನು ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಈಗ ನಿರಂತರವಾಗಿ ವಿಫಲರಾಗುವ ಮೂಲಕ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಗುತ್ತಿಗೆಯಲ್ಲಿ ಸ್ಥಾನ ಪಡೆದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್; ಇಬ್ಬರು ಕನ್ನಡಿಗರಿಗೆ ಸ್ಥಾನ
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದೆಹಲಿ ನಾಯಕ ಅಕ್ಸರ್ ಪಟೇಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಲಖನೌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಎಲ್‌ಎಸ್‌ಜಿ ತಂಡಕ್ಕೆ ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 87 ರನ್‌ಗಳ ಜೊತೆಯಾಟ ಆಡಿದರು. ಮಾರ್ಕ್ರಾಮ್ 33 ಎಸೆತಗಳಲ್ಲಿ 52 ರನ್ ಗಳಿಸಿದರೆ, ಮಾರ್ಷ್ 36 ಎಸೆತಗಳಲ್ಲಿ 45 ರನ್ ಗಳಿಸಿದರು.
ಆಯುಷ್ ಬದೋನಿ ಕೊನೆಯ ಓವರ್‌ಗಳಲ್ಲಿ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 15 ಎಸೆತಗಳಲ್ಲಿ 14 ರನ್ ಗಳಿಸಿ ಅಜೇಯರಾಗುಳಿದರು. ನಿಕೋಲಸ್ ಪೂರನ್ 9 ರನ್ ಗಳಿಸಿ ಔಟಾದರೆ, ಅಬ್ದುಲ್ ಸಮದ್ 2 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು.
ಆಯುಷ್ ಬಡೋನಿ ಔಟಾದ ನಂತರ, ನಾಯಕ ರಿಷಭ್ ಪಂತ್ 20 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬ್ಯಾಟಿಂಗ್‌ಗೆ ಬಂದರು. ಮುಖೇಶ್ ಕುಮಾರ್ ಎಸೆದ ಐದನೇ ಎಸೆತದಲ್ಲಿ ಅವರಿಗೆ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ. 20ನೇ ಓವರ್‌ನ ಕೊನೆಯ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ಬಾರಿಸಲು ಪ್ರಯತ್ನಿಸುವಾಗ ಅವರು ಕ್ಲೀನ್ ಬೌಲ್ಡ್ ಆದರು. ಇದಕ್ಕೂ ಮೊದಲು, ಮಾರ್ಚ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್‌ನ ಮೊದಲ ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದರು.