ಸ್ಯಾಫ್ ಚಾಂಪಿಯನ್‌ಶಿಪ್ ಫುಟ್‌ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ಗೆಲುವಿನ ಆರಂಭ ಪಡೆದಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4-0 ಗೋಲುಗಳಿಂದ ಭರ್ಜರಿಯಾಗಿದೆ ಮಣಿಸಿದೆ.
ನಾಯಕ ಸುನಿಲ್ ಛೆಟ್ರಿ ಹ್ಯಾಟ್ರಿಕ್ ಗೋಲು ದಾಖಲಿಸಿ ಮಿಂಚಿದರೆ ,ಬದಲಿ ಆಟಗಾರನಾಗಿ ಕಣಕ್ಕಿಳಿದ ಉದಾಂತ ಸಿಂಗ್ ಭಾರತದ ತಂಡದ ನಾಲ್ಕನೇ ಗೋಲು ದಾಖಲಿಸಿದರು.
ಪಂದ್ಯದ ಮೊದಲಾರ್ಧದಲ್ಲಿ ಭಾರತ 2-0 ಗೋಲುಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. 10ನೇ ನಿಮಿಷದಲ್ಲಿ ಪಾಕಿಸ್ತಾನದ ಗೋಲ್ ಕೀಪರ್ ಸಾಕಿಬ್ ಹನೀಫ್, ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಈ ಅವಕಾಶವನ್ನು ಬಳಸಿಕೊಂಡ ಭಾರತದ ನಾಯಕ ಛೆಟ್ರಿ ಸುಲಭವಾಗಿ ಗೋಲಿನ ಖಾತೆ ತೆರೆದರು. ಆ ನಂತರದಲ್ಲಿ ದೊರಕಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಛೆಟ್ರಿ ಗೋಲಾಗಿ ಪರಿವರ್ತಿಸಿದರು.
ಈ ಸುದ್ದಿ ಓದಿದ್ದೀರಾ? ಫುಟ್‌ಬಾಲ್ | ಛೆಟ್ರಿ ಗೋಲಿನ ಬಲದಲ್ಲಿ ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದ ಭಾರತ
ಸೆಪ್ಟೆಂಬರ್ 2018ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ಫುಟ್‌ಬಾಲ್ ತಂಡಗಳು ಬುಧವಾರ ಮುಖಾಮುಖಿಯಾಗಿದ್ದವು. ಐದು ವರ್ಷಗಳ ಹಿಂದೆ ನಡೆದ ಸ್ಯಾಫ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲೂ ಭಾರತ, 3-1 ಗೋಲುಗಳ ಅಂತರದಿಂದ ನೆರೆಯ ರಾಷ್ಟ್ರವನ್ನು ಮಣಿಸಿತ್ತು.
ಜೂನ್ 24ರಂದು ನಡೆಯಲಿರುವ ಪಂದ್ಯದಲ್ಲಿ ನೇಪಾಳವನ್ನು ಮತ್ತು ಜೂನ್ 27 ರಂದು ಕುವೈತ್ ತಂಡವನ್ನು ಭಾರತ ಎದುರಿಸಲಿದೆ. ಮತ್ತೊಂದೆಡೆ ಪಾಕಿಸ್ತಾನ, ಜೂನ್ 24 ರಂದು ಕುವೈತ್ ಮತ್ತು ಜೂನ್ 27 ರಂದು ನೇಪಾಳದ ವಿರುದ್ಧ ಪಂದ್ಯಗಳನ್ನಾಡಲಿದೆ.