ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 60 ರನ್‌ಗಳ ಭಾರಿ ಅಂತರದಿಂದ ಗೆದ್ದಿದೆ. ಆ ಗೆಲುವಿನಲ್ಲಿ 77 ರನ್ ಬಾರಿಸಿದ ಸ್ಮೃತಿ ಮಂಧಾನ ಪಾಲು ದೊಡ್ಡದಿದೆ. ಜೊತೆಗೆ ಚುಟುಕು ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ಆಕೆಯ ಪಾಲಾಗಿದೆ.
ವಿಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧಶತಕ ಬಾರಿಸುವುದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ಅರ್ಧ ಸೆಂಚುರಿ ಸಿಡಿಸಿದ ಮಹಿಳಾ ಬ್ಯಾಟರ್ ಎಂಬ ವಿಶ್ವ ದಾಖಲೆ ಸ್ಮೃತಿ ಮಂಧಾನ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿತ್ತು.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೊದಲು ಅತಿ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ಆಟಗಾರ್ತಿಯರು ಬರೆದಿದ್ದ ವಿಶ್ವ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.
ಶ್ರೀಲಂಕಾ ಆಟಗಾರ್ತಿ ಚಾಮರಿ ಅಟಪಟ್ಟು ಈ ವರ್ಷ 21 ಪಂದ್ಯಗಳಲ್ಲಿ 720 ರನ್ ಕಲೆಹಾಕಿದ್ದಾರೆ. ಹಾಗೆಯೇ ನ್ಯೂಜಿಲೆಂಡ್‌ನ ಸುಝಿ ಬೆಟ್ಸ್, 29 ಬಾರಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದೀಗ ಈ ಇಬ್ಬರನ್ನೂ ಹಿಂದಿಕ್ಕಿ 30ನೇ ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕುವ ಮೂಲಕ ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನು ಓದಿದ್ದೀರಾ?: ಆರ್ ಅಶ್ವಿನ್ | ಸಾಧಾರಣ ಕುಟುಂಬದ ಹುಡುಗ ಸ್ಟಾರ್ ಕ್ರಿಕೆಟಿಗನಾದ ಕತೆ
ಈ ವರ್ಷ 23 ಟಿ20 ಇನಿಂಗ್ಸ್ ಆಡಿರುವ ಸ್ಮೃತಿ ಮಂಧಾನ 8 ಅರ್ಧಶತಕಗಳೊಂದಿಗೆ 42.4 ಸರಾಸರಿಯಲ್ಲಿ ಒಟ್ಟು 763 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನ್ಯಾಟ್ ಸ್ಕಿವರ್-ಬ್ರಂಟ್, ಸೋಫಿ ಡಿವೈನ್ ಸೇರಿದಂತೆ 7 ಬ್ಯಾಟರ್ಗಳು ಒಂದೇ ವರ್ಷ 3 ಏಕದಿನ ಶತಕಗಳನ್ನು ಬಾರಿಸಿದ್ದರು. ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಒಂದೇ ವರ್ಷ 4 ಏಕದಿನ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.