ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ನೂತನ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ಹೊಸ ಟಿ20 ನಾಯಕರನ್ನಾಗಿ ನೇಮಿಸಿದೆ. ಕಳೆದೆರಡು ಆವೃತ್ತಿಗಳಲ್ಲಿನ ಕಳಪೆ ಫಾರ್ಮ್‌ನಿಂದಾಗಿ ಸೂರ್ಯಕುಮಾರ್ ಯಾದವ್ ಅವರು ನಾಯಕತ್ವದ ಜೊತೆಗೆ ತಂಡದಲ್ಲಿನ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಈ ನಿರಾಸೆಯ ನಡುವೆಯೂ ಸೂರ್ಯಕುಮಾರ್ ಯಾದವ್, ಸಾಮಾಜಿಕ ಜಾಲತಾಣದ ಮೂಲಕ ತಂಡಕ್ಕೆ ಶುಭಕೋರಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ತಂಡ ಪ್ರಕಟಗೊಂಡ ಸ್ವಲ್ಪ ಸಮಯದ ನಂತರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಸೂರ್ಯಕುಮಾರ್ ಯಾದವ್, “ಮುಂಬರುವ ಸವಾಲುಗಳಿಗಾಗಿ ಈ ಅತ್ಯಂತ ಕೌಶಲ್ಯಪೂರ್ಣ ಆಟಗಾರರ ತಂಡಕ್ಕೆ ನನ್ನ ಕಡೆಯಿಂದ ಶುಭಾಶಯಗಳು” ಎಂದು ಹೇಳುವ ಮೂಲಕ ಹೊಸ ತಂಡ ಮತ್ತು ನಾಯಕನಿಗೆ ಬೆಂಬಲ ಸೂಚಿಸಿದ್ದಾರೆ.
ತಂಡದ ಆಯ್ಕೆ ಮತ್ತು ನಾಯಕತ್ವದ ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, “ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸಲು ನಮ್ಮ ಬಳಿ ಸಾಕಷ್ಟು ಸಮಯವಿದೆ. ಇತ್ತೀಚೆಗಷ್ಟೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಹಾಗೂ ಪಂಜಾಬ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಸಾಮರ್ಥ್ಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ಬಹಳ ದಿನಗಳಿಂದ ತಂಡದಲ್ಲಿ ಸ್ಥಾನ ಪಡೆಯುವ ಸನಿಹದಲ್ಲಿದ್ದರು. ಸೂರ್ಯಕುಮಾರ್ ಅವರ ಕಳೆದೆರಡು ಆವೃತ್ತಿಯ ಫಾರ್ಮ್ ಕೂಡ ಈ ನಿರ್ಧಾರದ ಮೇಲೆ ಪ್ರಭಾವ ಬೀರಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್: ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬಕ್ಕೆ ಇನ್ನೊಂದೇ ವಾರ ಬಾಕಿ
2023, ಡಿಸೆಂಬರ್ 3ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ಟಿ20 ಪಂದ್ಯವನ್ನಾಡಿದ್ದ ಶ್ರೇಯಸ್ ಅಯ್ಯರ್, ಇದೀಗ ಸುದೀರ್ಘ ವಿರಾಮದ ನಂತರ ನೇರವಾಗಿ ನಾಯಕರಾಗಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಭಾರತ ತಂಡವು ಮೊದಲು ಜೂನ್ 26 ಮತ್ತು 28ರಂದು ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ತದನಂತರ ಜುಲೈ 1 ರಿಂದ 11ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ಈ ಬಾರಿಯ ತಂಡದ ಆಯ್ಕೆಯು ಭಾರತೀಯ ಕ್ರಿಕೆಟ್ ಇತಿಹಾಸದ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. 15 ವರ್ಷ ಮತ್ತು 71 ದಿನಗಳ ವಯಸ್ಸಿನ ವೈಭವ್, ಟೀಮ್ ಇಂಡಿಯಾಗೆ ಆಯ್ಕೆಯಾದ ‘ಅತ್ಯಂತ ಕಿರಿಯ ಆಟಗಾರ’ ಎಂಬ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅವರು ಅಳಿಸಿಹಾಕಿದ್ದಾರೆ. ಸಚಿನ್ ಅವರು ನವೆಂಬರ್ 15, 1989ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದಾಗ ಅವರ ವಯಸ್ಸು 16 ವರ್ಷ ಮತ್ತು 205 ದಿನಗಳಾಗಿತ್ತು.





