ಇರಾನ್ ಇಸ್ಲಾಮಿಕ್ ಕ್ರಾಂತಿಯ ಭೀಕರತೆ, ಸ್ವಾತಂತ್ರ್ಯಹರಣ ಮತ್ತು ಒಬ್ಬ ಹೆಣ್ಣು ಮಗಳಾಗಿ ತಾವು ಅನುಭವಿಸಿದ ದೇಶಭ್ರಷ್ಟತೆಯ ನೋವನ್ನು ಕಪ್ಪು ಬಿಳುಪಿನ ರೇಖಾ ಚಿತ್ರಗಳ ಮೂಲಕ ಮನಸ್ಸಿನಲ್ಲಿ ಹರಳುಗಟ್ಟುವಂತೆ ಹೇಳಿದ ಅವರ ʼಪರ್ಸೆಪೊಲಿಸ್ʼ ಲಕ್ಷಾಂತರ ಓದುಗರ ಕಣ್ಣು ತೆರೆಸಿದ ಕೃತಿ.
“In every religion, yu find the same extremists….”
Marjane Satrapi -French-Iranian graphic novelist, filmmaker and children book author
ನಮ್ಮಂಥವರ ಅಂತರಂಗವನ್ನು ಕೆಣಕಿದ ತಟ್ಟಿ ಎಬ್ಬಿಸಿದ ಪ್ರಸಿದ್ಧ ಗ್ರಾಫಿಕ್ ಕಾದಂಬರಿ ʼಪರ್ಸೆಪೊಲಿಸ್ʼ ಕೃತಿಯ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದ ಫ್ರೆಂಚ್-ಇರಾನಿಯನ್ ಕಾದಂಬರಿಗಾರ್ತಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಚಲನಚಿತ್ರಕರ್ತೆ, ಮಕ್ಕಳ ಪುಸ್ತಕಗಳ ಬರಹಗಾರ್ತಿ ಮಾರ್ಜಾನ್ ಸಾತಾಪ್ರಿ ಪ್ಯಾರಿಸ್ ನಲ್ಲಿ ಈ ಇಹಜಗತ್ತಿನ ಪ್ರಯಾಣ ಮುಗಿಸಿದ್ದಾರೆ.
ಸಾತ್ರಾಪಿ ಅಮೆರಿಕೆಯ ಬಗ್ಗೆ English ನಲ್ಲಿ ಹೇಳಿದ್ದನ್ನು ಕನ್ನಡದಲ್ಲಿಯೂ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದು ಸುಲಭವಾದ ಭಾಷೆಯಲ್ಲಿದೆ.
“ಅಮೆರಿಕದ ಧರ್ಮ ನಿರಪೇಕ್ಷ ಜನರಿಗೆ ನಾನು ಏನಾದರೂ ಹೇಳಬೇಕೆಂದು ಬಯಸಿದರೆ; ಅವು ಈ ಮಾತುಗಳು. ಈ ವಿಶ್ವ ದೇಶಗಳೆಂದು ಭಾಗಗೊಳ್ಳಲಿಲ್ಲ. ಪೂರ್ವ-ಪಶ್ಚಿಮವೆಂದು ತನ್ನನ್ನು ತಾನು ಒಡೆದುಕೊಳ್ಳಲಿಲ್ಲ. ನೀವು ಅಮೆರಿಕನ್ನರು, ನಾನು ಇರಾನಿನಾಕೆ. ನಾವಿಬ್ಬರೂ, ಒಬ್ಬರಿಗೊಬ್ಬರು ಪರಿಚಿತರಲ್ಲ. ಆದರೆ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದೇವೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡಿದ್ದೇವೆ. ಆದರೆ ನಮ್ಮ ನಿಮ್ಮ ಸರ್ಕಾರಗಳ ನಡುವಿನ ಭೇದ ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಗಿಂತ ಬಹು ದೊಡ್ಡದು. ಆದರೆ ನಮ್ಮಿಬ್ಬರ ಸರ್ಕಾರಗಳ ಮನಸ್ಸು ಒಂದೇ ರೀತಿಯದು…..” {“If I have one message to give to the secular American people, it is that the world is not divided into countries. The world is not divided between East and West, You are American ̧ I am Iranin ̧ We don ́t know each other, But we talk together and we understand each other perfectly, The difference between your and your government is much bigger than the difference between you and me. And the difference between me and my government is much bigger than the difference between me and you. And our governments are very much same”)
“ಸರ್ವಾಧಿಕಾರಗಳೆಲ್ಲವೂ ಒಂದೇ ಥರ ಇರುತ್ತವೆ. ಒಂದೇ ವಿನ್ಯಾಸವನ್ನು ಅನುಸರಿಸುತ್ತವೆ. ಬೀಳುವ ಮುನ್ನ ಅವು ತುಂಬಾ ಗಟ್ಟಿಯಾಗಿ ಕಾಣುತ್ತವೆ. ಆದರೆ ಬಿದ್ದ ತಕ್ಷಣ ಇಷ್ಟು ದಿನ ಅವು ಹೇಗೆ ಉಳಿದುಕೊಂಡಿದ್ದವೋ ಎಂದು ಜಗತ್ತು ಆಶ್ಚರ್ಯ ಪಡುತ್ತವೆ” ಎಂಬ ಅವರ ಮಾತುಗಳು ಶೋಷಿತರ ಪರವಾಗಿ ಅವರಿಗಿದ್ದ ದೃಢವಾದ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ತನ್ನ ಇರಾನಿನ ಬಾಲ್ಯವನ್ನು ಜಗತ್ತಿನ ಸಾರ್ವಜನಿಕ ಕಥನವಾಗಿ ಪರಿವರ್ತಿಸಿದ ಈ ಕ್ರಾಂತಿಕಾರಿ ಕಲಾವಿದೆ, ಸಾತ್ರಾಪಿ ಎಂಬ ಬರಹಗಾರ್ತಿ ಇನ್ನಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ. ಈಕೆಯ ಅಗಲಿಕೆಯಿಂದ ನಮ್ಮ ಜಗತ್ತು ಶೂನ್ಯವಾಯಿತು ಎಂದು ಹೇಳುವುದು ಕೂಡ ನನ್ನ ಪ್ರಕಾರ ಕ್ಲೀಷೆ. ಹಾಗಾಗಿ ಆಕೆ ತನ್ನ ಕೃತಿಗಳ ಮೂಲಕ ನಮ್ಮೊಂದಿಗೆ ಎಂದೆಂದಿಗೂ ಇದ್ದೇ ಇರುತ್ತಾರೆ ಎಂಬ ನಂಬಿಕೆಯೇ ಇದಕ್ಕೆ ಅಧಾರ.
ಲಕ್ಷಾಂತರ ಓದುಗರ ಕಣ್ಣು ತೆರೆಸಿದ ಕೃತಿ
ಇರಾನ್ ಇಸ್ಲಾಮಿಕ್ ಕ್ರಾಂತಿಯ ಭೀಕರತೆ, ಸ್ವಾತಂತ್ರ್ಯ ಹರಣ ಮತ್ತು ಒಬ್ಬ ಹೆಣ್ಣು ಮಗಳಾಗಿ ತಾವು ಅನುಭವಿಸಿದ ದೇಶಭ್ರಷ್ಟತೆಯ ನೋವನ್ನು ಕಪ್ಪು ಬಿಳುಪಿನ ರೇಖಾ ಚಿತ್ರಗಳ ಮೂಲಕ ಮನಸ್ಸಿನಲ್ಲಿ ಹರಳುಗಟ್ಟುವಂತೆ ಹೇಳಿದ ಅವರ ʼಪರ್ಸೆಪೊಲಿಸ್ʼ ಲಕ್ಷಾಂತರ ಓದುಗರ ಕಣ್ಣು ತೆರೆಸಿದ ಕೃತಿ. ಮರ್ಜಿ ಎಂಬ ಪುಟ್ಟ ಬಾಲಕಿಯ ಮುಗ್ಧ ದೃಷ್ಟಿಕೋನದಲ್ಲಿ ಇಡೀ ಇರಾನಿನ ರಾಜಕೀಯ ಏರುಪೇರುಗಳನ್ನು ಚಿತ್ರಿಸಿದ ಸಾತ್ರಾಪಿ ಇರಾನಿನ ನಿರಂಕುಶ ಮುಸ್ಲಿಂ ಮೂಲಭೂತವಾದದ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದರು. ಅದು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಅನುವಾದವಾಗಿ ಲಕ್ಷಾಂತರ ಓದುಗರ ಹೃದಯವನ್ನು ತಟ್ಟಿತು. ಲಕ್ಷಾಂತರ ಹೆಣ್ಣುಮಕ್ಕಳ ಕಣ್ಣೆವೆಗಳನ್ನು ಒದ್ದೆಯಾಗಿಸಿತು. ಈ ಪುಟ್ಟ ಬಾಲಕಿಯ ಮೂಲಕ ಇರಾನಿನ ಮೂಲಭೂತವಾದಿ ರಾಜಕೀಯ ಏರುಪೇರುಗಳನ್ನು ಚಿತ್ರಿಸಿದ ಸಾತ್ರಾಪಿ. ಈ ಎಲ್ಲದರ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ಸಾಹಿತ್ಯದ ಮೂಲಕ ಜಗತ್ತಿನ ಮುಂದೆ ಅನಾವರಣಗೊಳಿಸಿದರು. ಅವರ ಆ ಅಪೂರ್ವ ಕೃತಿ ಚಲನಚಿತ್ರವಾಗಿಯೂ ಮೂಡಿ ಬಂತು. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವೂ ಆದ ಅನಿಮೇಷನ್ ಕೃತಿ ಇದು. ಆದರೆ ರಾಜಕೀಯ ಕಾರಣಕ್ಕಾಗಿಯೋ ಏನೋ ಪ್ರಶಸ್ತಿ ದಕ್ಕಲಿಲ್ಲ. ಆದರೆ ಜನಮನ್ನಣೆ ಗಳಿಸಿತು. ಇರಾನಿನ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ Women ̧ Life ̧ Freedom ̧ ಚಳವಳಿಯ ಮೂಲಕ ಇಂದಿಗೂ ಸಾತ್ರಾಪಿಯನ್ನು ಗುರುತಿಸಲಾಗುತ್ತಿದೆ.
ಇರಾನಿನ ಪ್ರಗತಿಪರ ಮಾರ್ಕ್ಸ್ವಾದಿ ಕುಟುಂಬದಲ್ಲಿ ಜನಿಸಿದ ಮಾರ್ಜಾನ್ ಬಾಲ್ಯದಿಂದಲೇ ಸ್ವಾತಂತ್ರ್ಯದ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ಇರಾನಿನ ಮೂಲಭೂತವಾದಿಗಳ ಬಿಗುವಿನ ವಾತಾವರಣದಿಂದ ತಪ್ಪಿಸಿಕೊಳ್ಳಲು ಆಸ್ಟ್ರೀಯಾ ಮತ್ತು ಫ್ರಾನ್ಸ್ಗೆ ವಲಸೆ ಹೋದ ಅವರು ತನ್ನ ನೆಲದಿಂದ ದೂರವಾಗಿ, ಮಣ್ಣಿನ ವಾಸನೆಯನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ದೇಶಭ್ರಷ್ಟತೆಯ ನೋವನ್ನು ಜೀವನದುದ್ದಕ್ಕೂ ಅನುಭವಿಸಿದ್ದು ಅವರ ಬರಹಕ್ಕೆ ಒಂದು ರೀತಿಯಲ್ಲಿ ಪ್ರೇರಕವಾಯಿತು ಎನ್ನಿಸಿತು. ಅವರ ಮಾನವ ಪ್ರಜ್ಞೆಯ ಸ್ವಾತಂತ್ರ್ಯದ ನಿಲುವುಗಳನ್ನು ಪುರಸ್ಕರಿಸಿ ಫ್ರಾನ್ಸ್ ದೇಶ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ Legion of Honour ಕೊಟ್ಟು ಗೌರವಿಸಿತು. ಆದರೆ ಸಾತ್ರಾಪಿ ಅದನ್ನು ತಿರಸ್ಕರಿಸಿ, ಮಾನವ ಮೌಲ್ಯಗಳ ಬಗ್ಗೆ ತಮಗಿರುವ ಬದ್ಧತೆಯನ್ನು ಎತ್ತಿ ಹಿಡಿದು ಒಂದು ಮಾದರಿಯಾದರು.
ಪರ್ಸೆಪೊಲಿಸ್ ಕನ್ನಡದ ಅನುವಾದ
ಪರ್ಸೆಪೊಲಿಸ್ ಕೃತಿಯನ್ನು ನನ್ನ ಕಿರಿಯ ಗೆಳತಿ ಪ್ರೀತಿ ನಾಗರಾಜ್ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಕುರಿತು ನಾನು 2023ರ ಜನವರಿ 3 ರಂದು South First Website ನಲ್ಲಿ ಇಂಗ್ಲಿಷ್ ನಲ್ಲಿ ಬರೆದಿದ್ದೆ. ನಾನು Englishನಲ್ಲಿ ಬರೆದಿದ್ದೆ ಎಂದು ಅಹಂಕಾರದಿಂದ ಹೇಳುತ್ತಿಲ್ಲ. ಆದರೆ, ಇದು ಅದನ್ನು ಕನ್ನಡೇತರ ಓದುಗರಿಗೆ ಇಂಥದ್ದೊಂದು ಪುಸ್ತಕ ಕನ್ನಡದಲ್ಲೂ ಬಂದಿದೆ ಎಂಬ ಮಾಹಿತಿ ತಲುಪಿಸುವ ನಮ್ರ ಪ್ರಯತ್ನವಾಗಿತ್ತು. ಒಬ್ಬ ಹೆಣ್ಣುಮಗಳ ನೋವು, ಸಂಕಟ, ಕ್ರೂರ ವ್ಯವಸ್ಥೆಯ ಜೊತೆಗಿನ, ಸರ್ವಾಧಿಕಾರಿ ಧಾರ್ಮಿಕದತ್ತವಾದ ಅಧಿಕಾರವನ್ನು ಎದುರಿಸಿರುವುದನ್ನು ಮತ್ತೊಬ್ಬ ಹೆಣ್ಣುಮಗಳು ಹೆಣ್ಣು ಹೃದಯದ ದೃಷ್ಟಿಯಿಂದ ಅನುವಾದಿಸಿರುವುದೇ ಈ ಕೃತಿಯ ಮಹತ್ವ ʼಪರ್ಸೆಪೊಲಿಸ್ʼ ಕೃತಿಯನ್ನು ಎಲೀ ವೀಸೆಲ್ ಅವರ ʼನೈಟ್ ಮತ್ತು ʼದ ಡೈರಿ ಆಫ್ ಆನ್ ಫ್ರಾಂಕ್ʼಗೆ ಹೋಲಿಸಬಹುದಾದಂಥ ಕೃತಿ. ʼಪರ್ಸೆಪೊಲಿಸ್ʼ ಕೃತಿಯನ್ನು ಇರಾನ್ ನಲ್ಲಿ ಬಹಿಷ್ಕರಿಸಲಾಯಿತು. ಗ್ರಂಥಾಲಯಗಳಿಂದ ದೂರ ಸಾಗಿಸಲಾಯಿತು. ಷಿಕಾಗೋದ ಸಾರ್ವಜನಿಕ ಶಾಲೆಯಲ್ಲಿ ಕೂಡ ಇದನ್ನು ಓದಲಾಗದಂತೆ ನಿಷೇಧಿಸಲಾಯಿತು. ಅಂಥ ಕೃತಿಯನ್ನು ಕನ್ನಡಕ್ಕೆ ತಂದದಕ್ಕೆ ನಾವು ಪ್ರೀತಿ ನಾಗರಾಜ್ ಅವರಿಗೆ, ಅದನ್ನು ಪ್ರಕಟಿಸಿದ ಛಂದ ಪುಸ್ತಕದ ವಸುಧೇಂದ್ರ ಅವರನ್ನು ನಾವು ಅಭಿನಂದಿಸಲೇ ಬೇಕು. ಪ್ರೀತಿ ನಾಗರಾಜ್ ಒಂದು ಕಾಲದಲ್ಲಿ ನಮ್ಮೊಂದಿಗೆ ಪತ್ರಕರ್ತರಾಗಿದ್ದರು. ನಂತರ ಬರಹಗಾರರಾದರೂ, ಈಗ ಅನುವಾದಕರೂ ಆಗಿದ್ದಾರೆ. ಹಲವಾರು ಕೃತಿಗಳನ್ನು ರಚಿಸಿದ್ದಾರೆ. ದೇಶದ ಸಂಕಷ್ಟ ಸ್ಥಿತಿಯಲ್ಲಿ ಧೈರ್ಯವಾಗಿ ಆಡಳಿತದ ಶಕ್ತಿಗಳನ್ನು ಎದುರು ಹಾಕಿಕೊಂಡು ಪ್ರಶ್ನಿಸುತ್ತಿದ್ದಾರೆ. ಪ್ರಶ್ನಿಸುವುದು ಕಷ್ಟವಾದಾಗ ನಮ್ಮೊಂದಿಗೆ ಸೇರಿ ಲೇವಡಿ ಮಾಡಿ, ತಮ್ಮ ಸಿಟ್ಟು ತೋಡಿಕೊಳ್ಳುತ್ತಾರೆ.
ಪರ್ಷಿಯಾದ ರಾಜಧಾನಿ ಎಂದರ್ಥ
ಆಶ್ಚರ್ಯವೆಂದರೆ, ನಿಷೇಧಗಳ ನಡುವೆಯೂ ಈ ಪುಸ್ತಕದ ಸುಮಾರು ಎರಡು ಮಿಲಿಯನ್ ಪ್ರತಿಗಳು ಮಾರಾಟವಾಗಿದೆಯೆಂದರೆ ಸಾತ್ರಾಪಿಯ ಉಗ್ರ ಬರವಣಿಗೆಯ ಪ್ರತಾಪ ಯಾವ ಮಟ್ಟಿನದು ಎಂದು ಯಾರಾದರೂ ಊಹಿಸಬಹುದು. ʼಪರ್ಸೆಪೊಲಿಸ್ʼ ಎಂದರೆ ಕನ್ನಡದಲ್ಲಿ ಪರ್ಶಿಯಾದ ರಾಜಧಾನಿ ಎಂದರ್ಥ. ಆದರೆ ಸಾತ್ರಾಪಿ ಈ ಕೃತಿಯನ್ನು ತನ್ನ ಭಾಷೆಯಾದ ಫಾರ್ಸಿಯಲ್ಲಿ ಬರೆಯಲಿಲ್ಲ. ಪಶ್ಚಿಮದ ಓದುಗರಿಗೆ ತಮ್ಮ ಸಂಕಷ್ಟ ಮುಟ್ಟಲೆಂದು ಫ್ರೆಂಚ್ ಭಾಷೆಯಲ್ಲಿ ಬರೆದರು. ಈ ಕೃತಿಯಲ್ಲಿ ಇರಾನ್ ನ ಕ್ರಾಂತಿಪೂರ್ವ ಯುಗ ಮತ್ತು ಕ್ರಾಂತಿ ನಂತರದ ಯುಗದ ಬಗ್ಗೆ ಅತಿ ವಿಸ್ತಾರವಾದ, ಆಳವಾದ ತಿಳಿವಳಿಕೆಯ ದೃಷ್ಟಿಕೋನಗಳ ದೃಶ್ಯರೂಪಗಳಿವೆ. ಈ ಕಥನ ನೇರ ಕಪ್ಪು ಬಿಳುಪಿನ ಮಾದರಿಯಲ್ಲಿದೆ. ಈ ಕಥೆಯ ಕೇಂದ್ರ ಬಿಂದು ಮಾರ್ಜಿ ಯುದ್ಧ ಪೀಡಿತ ಟೆಹರಾನ್ ನ ರಸ್ತೆಗಳಲ್ಲಿ ಸಂಚರಿಸುವ ರೋಚಕ ದೃಶ್ಯಗಳಿವೆ. ರೇಜಾ ಪಲ್ಲವಿ ಅಧಿಕಾರ ಪತನ ನಂತರ ಇರಾನ್-ಇರಾಕ್ ಯುದ್ಧ ಎಲ್ಲ ವಿವರಗಳೂ ದಾಖಲಾಗಿವೆ. ಸಾತ್ರಾಪಿ ತನ್ನ 10 ವರ್ಷದಿಂದ 14 ವರ್ಷದವರೆಗಿನ ಜೀವನದ ರಾಜಕೀಯ, ಸಾಮಾಜಿಕ, ಸಂಗತಿಗಳನ್ನು ಕುಟುಂಬ, ಸಂಸ್ಕೃತಿ ಮತ್ತು ದೇಶದ ದೃಷ್ಟಿಯಿಂದ ಕಂಡಂತೆ ಕಂಡರಿಸಿದ್ದಾರೆ. ಪರ್ಸೆಪೋಲಿಸ್ ಅನ್ನು ಅನಿಮೇಷನ್ ಚಿತ್ರವಾಗಿ ಸೋನಿ ಪಿಕ್ಚರ್ಸ್ ನವರು ನಿರ್ಮಿಸಿದ್ದಾರೆ. ವಿನ್ಸೆಂಟ್ ಪರೊನ್ನಾಡ್ ಮತ್ತು ಮಾರ್ಜಾನ್ ಸಾತ್ರಾಪಿ ಜತೆಯಾಗಿ ಚಿತ್ರೀಕರಿಸಿದ್ದಾರೆ.
ಕನ್ನಡಕ್ಕೆ ಅನುವಾದವಾದ ಮೊದಲ ಗ್ರಾಫಿಕ್ ಕೃತಿ
ಎಲ್ಲಕ್ಕಿಂತ ಮುಖ್ಯವಾಗಿ ಇದು ಕನ್ನಡಕ್ಕೆ ಅನುವಾದಗೊಂಡ ಮೊಟ್ಟ ಮೊದಲ ಗ್ರಾಫಿಕ್ ವಿದೇಶಿ ಭಾಷೆಯ ಕಥನ. ಮೊದಲು ಫ್ರೆಂಚ್ ಭಾಷೆಯಲ್ಲಿ ಬಂದ ಈ ಕಥನ ನಂತರ 2003ರಲ್ಲಿ ಮಥಿಯಾಸ್ ರಿಪಾ ಇಂಗ್ಲಿಷ್ ಗೆ ಅನುವಾದಿಸಿದರು. ಪ್ರೀತಿ ನಾಗರಾಜ್ ಅವರು ಈ ಇಂಗ್ಲಿಷ್ ಅನುವಾದವನ್ನು ಆಧರಿಸಿ, ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿದ್ದಾರೆ. “ ವಸುಧೇಂದ್ರ ಈ ಕೃತಿಯನ್ನು ಅನುವಾದಿಸುವಂತೆ ಕೋರಿದಾಗ, ಮೊದಲ ಒಪ್ಪಿದೆ.ಆದರೆ ಅನುವಾದ ಕೈಗೊಂಡಾಗ ಇದನ್ನು ಅನುವಾದಿಸುವ ನಿಜವಾದ ಕಷ್ಟದ ಅರಿವಾಯಿತು. ಸಾಮಾನ್ಯ ಅನುವಾದದ ಜಾಯಮಾನಕ್ಕೆ ದಕ್ಕದ ಕೃತಿ ಎಂದು ಪ್ರೀತಿ 2023ರಲ್ಲಿ ಹೇಳಿದ್ದು ಮೂರು ವರ್ಷದ ನಂತರವೂ ನೆನಪಾಗುತ್ತಿದೆ. ಇದನ್ನು ಅನುವಾದಿಸುವ ಮುನ್ನ ಪ್ರೀತಿ ಸಾಕಷ್ಟು ಅಧ್ಯಯನ ಮಾಡಬೇಕಾಯಿತು. ಇರಾನಿನ ರಾಜಕಾರಣದ, ಧರ್ಮಕಾರಣದ ಅಂತರಾಳವನ್ನು ಅರ್ಥಮಾಡಿಕೊಳ್ಳಬೇಕಾಯಿತು. ಎಷ್ಟೋ ಕೃತಿಗಳಲ್ಲಿ ರಾಷ್ಟ್ರವೊಂದು ಕಾಣುವ ರಾಜಕೀಯ ಸ್ಥಿತ್ಯಂತರ, ಹಾಗೂ ಅದರ ಮಾದರಿಗಳಿವೆ. ಆದರೆ ʼಪರ್ಸೆಪೊಲಿಸ್ ʼನ ದೃಷ್ಟಿಯೇ ಭಿನ್ನವಾದುದು.
ಪರ್ಸೆಪೊಲಿಸ್ ಮತ್ತು ಬೂಂಗ್
ಪರ್ಸೆಪೊಲಿಸ್ʼ ಬಗ್ಗೆ ಈಗ ಬರೆಯುತ್ತಿರುವಾಗ ನಾನು ಇತ್ತೀಚೆಗೆ ನ್ಯೂಯಾರ್ಕ್ ಭಾರತೀಯ ಚಿತ್ರತ್ಸವದಲ್ಲಿ ಮತ್ತೊಮ್ಮ ನೋಡಿದ ʼಬೂಂಗ್ʼ ಎಂಬ ಚಿತ್ರ. ಸಂಘರ್ಷವೇ ಬದುಕಿನ ಭಾಗವಾಗಿರುವ ಭಾರತದ ಈಶಾನ್ಯ ಸೀಮೆಯ ಮಣಿಪುರವನ್ನು ಪ್ರತಿನಿಧಿಸುವ ಚಿತ್ರ ʼಬೂಂಗ್ʼ. ಈ ಚಿತ್ರ ಇತ್ತೀಚೆಗೆ ಆಸ್ಕರ್ ನಷ್ಟೇ ಪ್ರಧಾನವಾದ ಲಂಡನ್ನ ಪ್ರತಿಷ್ಠಿತ ಬಾಫ್ಟಾ (BAFTA) ‘ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಈ ಚಿತ್ರ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂದು, Biffes ನ ಘನತೆಯನ್ನು ಹೆಚ್ಚಿಸಿತ್ತು. ಇಂದಿನ ಮಣಿಪುರದ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರಿತವಾಗ ʼಬೂಂಗ್ʼ ಬೂಂಗ್ ಎಂಬ ತುಂಟ ಬಾಲಕನ ಸುತ್ತ ಹೆಣೆದ ಕಥೆ. ಸ್ಥಳೀಯ ಕಥೆಯಂತೆ ಆರಂಭವಾಗುವ ಈ ಚಿತ್ರ ಮುಗಿಯುವ ವೇಳೆಗೆ ಭಾರತವಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ನಡೆಯುತ್ತಿರುವ ಜನಾಂಗೀಯ ಕದನಕ್ಕೆ ಕನ್ನಡಿ ಹಿಡಿಯುತ್ತಾ, ಒಂದು ಅಗಾಧ ಜಗತ್ತನ್ನ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತದೆ. ಈ ಬೂಂಗ್ ಬಾಲಕನ ಪಾತ್ರವನ್ನು ಮಾಡಿರುವ ಹುಡುಗ ಗುಗುನ್ ಕಿಪ್ಜೆನ್, ಈ ಹುಡುಗ ಕಾಣೆಯಾಗಿರುವ ಅಥವಾ ಮರಣಹೊಂದಿರುವ ಸಾಧ್ಯತೆ ಇರುವ ತನ್ನ ತಂದೆ ಜೋಯ್ ಕುಮಾರ್ ನನ್ನು ಹುಡುಕಿಕೊಂಡು ಹೊರಡುವ ಪ್ರಯಾಣದ ಕಥೆ. ಈ ಕಥೆ ಮೊರೇಹ್ ಎಂಬ ಪುಟ್ಟ ಊರಿನ ಸುತ್ತು ಚಲಿಸುತ್ತದೆ. ಆದರೆ ಜನಾಂಗೀಯ ಕದನದಲ್ಲಿ ಈ ಕಥೆಯ ಕೇಂದ್ರ ಬಿಂದುವಾಗಿರುವ ಮೊರೇಹ್ ನಾಶವಾಗುತ್ತದೆ. ಈ ಚಿತ್ರವನ್ನು ನೋಡುವ ಮಣಿಪುರದ ಮಂದಿ ಕೊನೆಯ ಕಾಲಘಟ್ಟದಲ್ಲಿ ತಮ್ಮ ಮೊರೇಹ್ ಹೇಗಿತ್ತು ಎನ್ನುವ ಚಿತ್ರವನ್ನು ಕಾಣಬಹುದು. ಎಂದೂ ಮೊರೇಹ್ ಅನ್ನು ನೋಡದ ನಾವೂ ಕೂಡ ನೋಡಬಹುದು.
ಈ ಚಿತ್ರವನ್ನು ನಿರ್ಮಿಸುವಾಗ ಮೊರೇಹ್ ನಲ್ಲಿ ಒಂದು ಉತ್ಸವ ನಡೆಯುತ್ತಿತ್ತಂತೆ. ಮೊರೇಹ್ ನ ಹೆಬ್ಬಾಗಿಲಲ್ಲಿ ಒಂದು ದೇವತೆಯ ವಿಗ್ರಹವಿತ್ತಂತೆ. ಅಲ್ಲೊಂದು ದೇವಾಲಯವಿದ್ದು, ಅಲ್ಲಿ ಪ್ರತಿವರ್ಷ ಜಾತ್ರೆಯಂಥ ಹಬ್ಬ ನಡೆಯುತ್ತಿತ್ತಂತೆ. ಇಲ್ಲಿಗೆ ತಮಿಳರು, ಮಾರವಾಡಿಗಳು, ಬರ್ಮೀಯರೂ ಸೇರಿದಂತೆ ಹಲವು ಜನಾಂಗದವರು ಸೇರುತ್ತಿದ್ದರಂತೆ. ಆ ಮೋರೇಹ್, ಈಗ ವೆರ್ನರ್ ಹೆರ್ಜೋಗ್ ನ In To The Inferno ಚಿತ್ರದ ಪಟ್ಟಣದಂತೆ ಕಾಣುತ್ತಿದೆ ಎನ್ನುವುದು ಕಾಲದ ವ್ಯಂಗ್ಯ. . ಈ ಚಿತ್ರವು ಮಣಿಪುರದ ಶಾಲಾ ಬಾಲಕ ಬೂಂಗ್ನ ಸುತ್ತ ಸುತ್ತುತ್ತದೆ. ಜನಾಂಗೀಯ ಸಂಘರ್ಷ ಮತ್ತು ಗಡಿಭಾಗದ ಸವಾಲುಗಳ ನಡುವೆ, ತನ್ನ ಒಡೆದು ಹೋದ ಕುಟುಂಬವನ್ನು ಮತ್ತೆ ಒಂದುಗೂಡಿಸಲು ಆತ ನಡೆಸುವ ಪ್ರಯತ್ನ ಮತ್ತು ಭಾವನಾತ್ಮಕ ಪ್ರಯಾಣವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ. ಈ ಚಿತ್ರವನ್ನು ತಯಾರಿಸುತ್ತಿರುವಾಗ ಡೇರೆಯಲ್ಲಿ ಸೊಳ್ಳೆಪರದೆಯೊಳಗೆ ಹುದುಗಿ ಮಲಗಿರುತ್ತಿದ್ದ ನಿರ್ದೇಶಕಿ ದೂರದಿಂದ ಬಂದೂಕುಗಳಿಂದ ಹಾರುತ್ತಿದ್ದ ಗುಂಡುಗಳ ಸದ್ದು, ಸತ್ತು ನೆಲಕ್ಕುರುಳಿದ್ದ ಜೀವಗಳ ಆರ್ತನಾದ ಕೇಳಿಸುತ್ತಿತ್ತಂತೆ. ಈ ಸಂಘರ್ಷದಿಂದಾಗಿ ಮಣಿಪುರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಕ್ಷಣಾತ್ಮಕ ಪ್ರಶ್ನೆಗಳು ಕೇಂದ್ರ ಸರ್ಕಾರದ ಮುಂದಿದೆ. ಆದರೆ ದೇಶವನ್ನು ಆಳುತ್ತಿರುವವರಿಗೆ ಈಗ ಅವರ ಸಮಸ್ಯೆಗಳನ್ನು ಪರಿಹರಿಸುವಷ್ಟು ಸಮಯವಿಲ್ಲ ಎಂದು ಖಚಿತವಾಗಿದೆ. ಈ ಸಂಘರ್ಷದಲ್ಲಿ ಕಳೆದುಹೋಗಿರುವ ತಂದೆಯನ್ನು ಹುಡುಕಲು ಹೊರಟಿರುವ ಹುಡುಗನೊಬ್ಬನ ಮೂಲಕ ಇಡೀ ಸಮುದಾಯ ಎದುರಿಸುತ್ತಿರುವ ಸಂಕೀರ್ಣ ಸ್ಥಿತಿಯನ್ನು ಸುಮಾರು ಒಂದೂವರೆ ಗಂಟೆಯ ʼಬೂಂಗ್ʼ ಯಶಸ್ವಿಯಾಗಿ ಹೇಳುತ್ತದೆ.
ಬಲಿಪಶುಗಳಾದ ಹೆಣ್ಣು ಮಕ್ಕಳು
“ಸಾಕಷ್ಟು ಅಧ್ಯಯನದ ನಂತರ ನನಗನ್ನಿಸಿದ್ದು, ಸಾಕಷ್ಟು ದೇಶಗಳು, ಈ ಸಂಕಷ್ಟವನ್ನು ಎದುರಿಸುತ್ತಿವೆ ಎಂದೇ. ಆಗ ಅನ್ನಿಸಿದ್ದು, ಈ ಯುದ್ಧ ಮತ್ತು ಅಂತರ್ಯುದ್ಧದಲ್ಲಿ ನಿಜವಾದ ಬಲಿಪಶುಗಳೆಂದರೆ ಹೆಣ್ಣುಮಕ್ಕಳೇ. ಎಷ್ಟೋ ಕಥನಗಳಲ್ಲಿ ಅವರ ಬಲಿಪಶುತನ ಗೈರು ಹಾಜರಾಗಿರುತ್ತದೆ. ಹಾಗಾಗಿ ಬಲಿಪಶುವಾಗುತ್ತಿರುವ ಹೆಣ್ಣುಮಕ್ಕಳ ದೃಷ್ಟಿಯಿಂದ ಈ ಕೃತಿಯನ್ನು ನೋಡುವುದು ಸರಿ ಎಂದೇ ನನಗನ್ನಿಸಿತು” ಈ ಅನುವಾದ ಮಾಡುವಾಗಲೂ, ಆ ಅನುಭವಗಳಿಗೆ ಸಮಾನಾಂತರ ಕನ್ನಡ ಪದ ಹುಡುಕುವುದು, ಅ ಪದ ಕೂಡ ಅರ್ಥಗರ್ಭಿತವಾಗಿರಬೇಕೆಂದು ನಾನು ಬಯಸಿದ ಕಾರಣ, ಅನುವಾದ ಸುಮಾರು ಎರಡು ತಿಂಗಳ ನನ್ನ ಕಾಲವನ್ನು ತೆಗೆದುಕೊಂಡಿತು. ಹಾಗಾಗಿ ನನ್ನದೇ ಮಾದರಿಯನ್ನು ಕಂಡುಕೊಂಡೆ. ಹಾಗೂ ಈ ಅನುವಾದದ ಸಂದರ್ಭಲ್ಲಿ ಹಲವಾರು ಸಂಗತಿಗಳನ್ನು ಅಂತರ್ಗತ ಮಾಡಿಕೊಳ್ಳಲು ಅದು ನನಗೆ ಸಹಕಾರಿಯಾಯಿತು” ಎನ್ನುತ್ತಾರೆ ಪ್ರೀತಿ ನಾಗರಾಜ್.
ಈ ಮಾರ್ಜಿನಾ ಸಾತ್ರಾಪಿ ಅಕಾಲ ಮರಣಕ್ಕೆ ತುತ್ತಾಗಿರುವ ಈ ಸಂದರ್ಭದಲ್ಲಿ ಪ್ರೀತಿ ನಾಗರಾಜ್ ತಮ್ಮ ಫೇಸ್ ಬುಕ್ ನಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅವರ ಅನುಮತಿ ಪಡೆದು ಅದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
“ಎಂದೂ ಭೇಟಿಯಾಗಲಾಗದ ಸಾತ್ರಾಪಿಗೊಂದು ವಿದಾಯದ ಪತ್ರ. “ನೀವು ಈ ಜಗತ್ತಿನಿಂದ ನಿರ್ಗಮಿಸಿದಾದ ನನಗೆ ಮೌನವಾಗಿ ದುಃಖಿಸಲು ಸಾಧ್ಯವಾಗಲಿಲ್ಲ ಎನ್ನುವುದು ನನ್ನ ದುರಂತ. ನಿಮ್ಮ ಕೃತಿಯನ್ನು ಅನುವಾದಿಸುವ ಮುನ್ನ ನಿಮ್ಮ ಛಾಯಾಚಿತ್ರವೊಂದು ನನ್ನ ಹೃದಯವನ್ನು ಮುಟ್ಟಿತ್ತು. ಕೈಯಲ್ಲಿ ನಿಗಿನಿಗಿ ಸುಡುವ ಸಿಗರೇಟನ್ನು ಹಿಡಿದು, ಕ್ಯಾಮಾರಾದ ಆತ್ಮದೊಂದಿಗೆ ಸಂವಾದಿಸುತ್ತಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ನಿಮ್ಮ ಚಿತ್ರ. ಆ ಚಿತ್ರ ಕ್ಯಾಮಾರಾ ಕಣ್ಣಿಗೆ ಬೀಳಬೇಕೆಂಬ ಯಾವ ಆಕಾಂಕ್ಷೆಯೂ ಇಲ್ಲದೆ, ಇನ್ಯಾರಿಗೂ ಇನ್ನೇನನ್ನೂ ಋಜುವಾತು ಮಾಡಬೇಕಿಲ್ಲ ಎನ್ನುವ ದಿಟ್ಟ ನೋಟ ಅದರಲ್ಲಿತ್ತು. ಅದರೊಂದಿಗೆ ಕೆಲವು ಶಬ್ದಗಳಿದ್ದರೂ, ನೀವು ಹೇಳಬೇಕಾದ್ದನ್ನೆಲ್ಲ ಆ ಚಿತ್ರ ಹೇಳಿತ್ತು. ಆಗ ಅನ್ನಿಸಿತು. ಈ ಹೆಣ್ಣುಮಳು, ಉರಿವ ಬೆಂಕಿಯ ಹಾಗೆ, ತನ್ನನ್ನೇ ತಾನು ಅಗ್ನಿಪರೀಕ್ಷೆಗೆ ಒಡ್ಡಿಕೊಂಡ ಭಾವ. ಒಮ್ಮೆ ಈಕೆಯ ಕೃತಿಯನ್ನು ಅನುವಾದಿಸುತ್ತೇನೆ. ಆಕೆಯ ಧ್ವನಿಯಲ್ಲಿಯೇ ಕನ್ನಡದಲ್ಲಿ ಮಾತನಾಡುತ್ತೇನೆ ಎಂಬ ಯೋಚನೆಯೂ ಬಂದಿರದ ಕಾಲ ಅದು. ಈ ನಡುವೆ ವಸುಧೇಂದ್ರ ಈ ಕೃತಿಯನ್ನು ನಮಗಾಗಿ ಅನುವಾದಿಸುತ್ತೀರಾ? ಎಂದು ಕೇಳಿದಾಗ. ನನ್ನ ಸಂತೋಷಕ್ಕೆ ಮಿತಿ ಇಲ್ಲದಂತಾಗಿತ್ತು. ಅದೆಲ್ಲ ಇರಲಿ, ನಾನು ಎಂದೂ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ. ಯಾವುದದರೂ, ಸಾಹಿತ್ಯೋತ್ಸವದಲ್ಲಿ ಭೇಟಿಯಾಗಬಹುದೇನೋ ಎಂಬ ದೂರದ ಆಸೆಯೂ ಇತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇನ್ನು ಮುಂದೆ ಅದು ಸಾಧ್ಯವೂ ಇಲ್ಲ ಎಂಬ ಸತ್ಯ ಈಗ ನನಗೆ ನಿಧಾನವಾಗಿ ನನ್ನ ಅಂತರಂಗಕ್ಕಿಳಿಯುತ್ತಿದೆ. ನಿಮ್ಮ ಕೃತಿಯನ್ನು ಅನುವಾದಿಸುವಾಗ ಅದರಲ್ಲಿನ ಮೌನವನ್ನು ನಾನು ಅನುವಾದಿಸಲು ಪ್ರಯತ್ನಿಸಿದ್ದೇನೆ. ಆ ಮೂಲಕ ನಾನು ಭಾವುಕಳಾಗಿ ನಿಮ್ಮನ್ನು ಭೇಟಿ ಮಾಡಿದ್ದೇನೆ ಎಂದೇ ನನ್ನ ಭಾವನೆ. ನೀವು ನಮ್ಮಿಂದ ಅಗಲಿದಾಗ ನಿಮಗೆ ಕೇವಲ 56 ವರ್ಷ. ನಿಮಗೆ ಹೇಳುವುದು ಇನ್ನು ಸಾಕಷ್ಟಿತ್ತು ಅನ್ನಿಸುತ್ತದೆ. ನೀವು, ನಿಮ್ಮನ್ನು ನಿಮ್ಮ ಸುತ್ತಲಿನ ಜಗತ್ತನ್ನು ಪ್ರೀತಿಸಿದ್ದರಲ್ಲಿ ಒಂದು ರೀತಿಯ ರೋಷವಿದೆ. ಅದು ನಮಗೆಲ್ಲ ಬೇಕಿತ್ತು. ಹಾಗೆಯೇ ನೀವು ಅನುಭವಿಸಿದ ನೋವು ಸಂಕಟ ಅಂತಃಕರಣ ಕಲಕುವಂಥದ್ದು. ಇತರ ಭಾಷೆಗಳ ಜೊತೆ ನೀವು ಕನ್ನಡದಲ್ಲಿಯೂ ಬದುಕಿದ್ದೀರಿ ಎಂದಷ್ಟೇ ಹೇಳಲು ಸಾಧ್ಯ. ಇದಕ್ಕಾಗಿ ವಸುಧೇಂದ್ರನಿಗೆ ಕೂಡ ಧನ್ಯವಾದಗಳು.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.




