ಟಿ20 8ನೇ ಆವೃತ್ತಿಯ 18ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಉಗಾಂಡ ತಂಡವನ್ನು ಕೇವಲ 39 ರನ್‌ಗಳಿಗೆ ಆಲೌಟ್ ಮಾಡಿ 134 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಅಕೆಲ್ ಹೊಸೈನ್ ಅಮೋಘ ಐದು ವಿಕೆಟ್ ಕಬಳಿಸುವ ಮೂಲಕ ವಿಂಡೀಸ್ ತಂಡಕ್ಕೆ ದಾಖಲೆ ಅಂತರದ ಜಯ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ ಕುಖ್ಯಾತಿಗೆ ಉಗಾಂಡ ಪಾತ್ರವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಸವಾಲಿನ ಮೊತ್ತ ದಾಖಲಿಸಿತು. ಜಾನ್ಸನ್ ಚಾರ್ಲ್ಸ್ ವೇಗಿಗಳ ವಿರುದ್ಧ ಆಕ್ರಮಣಕಾರಿ ಆಟವಾಡಿ 44 ರನ್ ಗಳಿಸಿ ತಂಡದಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದರು. ಆಲ್‌ರೌಂಡರ್ ಆಂಡ್ರೆ ರಸೆಲ್ (30) ಆತಿಥೇಯರ ಪರ ಉತ್ತಮ ಆಟವಾಡಿದರು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ | ಕೆನಡಾ ವಿರುದ್ಧ ಅಮೆರಿಕ ಶುಭಾರಂಭ; ಮಿಂಚಿದ ಕನ್ನಡಿಗ
ಅನುಭವಿ ನಿಕೋಲಸ್ ಪೂರನ್(22) ಕೂಡಾ ವೇಗವಾಗಿ ರನ್ ಕಲೆ ಹಾಕಲು ಮುಂದಾದರು. ಉತ್ತಮ ಆರಂಭದ ಹೊರತಾಗಿಯೂ ಕೊನೆಯ ಓವರ್‌ಗಳಲ್ಲಿ ತಂಡದಿಂದ ಹೆಚ್ಚಿನ ಮೊತ್ತ ಹೆಚ್ಚಿಸಲು ಸಾಧ್ಯವಾಗಲಿಲ್ಲ.
174 ರನ್‌ಗಳ ಗುರಿ ಬೆನ್ನಟ್ಟಿದ ಉಗಾಂಡಾ, ಕೇವಲ 12 ಓವರ್‌ಗಳಲ್ಲಿ 39 ರನ್‌ಗಳಿಗೆ ಆಲೌಟ್ ಆಯಿತು. ಬೃಹತ್ ಗುರಿಗೆ ಉತ್ತರವಾಗಿ ಉಗಾಂಡಾ ಮೊದಲ 37 ಎಸೆತಗಳಲ್ಲಿ ಕೇವಲ 22 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಕೇವಲ 39 ರನ್‌ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಜಂಟಿಯಾಗಿ ದಾಖಲಿಸಿದ ಅತ್ಯಲ್ಪ ಮೊತ್ತವಾಗಿದೆ.
11 ರನ್‌ಗಳಿಗೆ 5 ವಿಕೆಟ್ ಕಬಳಿಸಿದ ಅಕೆಲ್ ಹೊಸೈನ್ ತಂಡದ ಗೆಲುವಿನ ರೂವಾರಿಯಾದರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಎರಡನೇ ಅತಿ ದೊಡ್ಡ ಗೆಲುವು
ವೆಸ್ಟ್ ಇಂಡೀಸ್ ಪಾಲಿಗೆ ಇದು ಟಿ20 ಕ್ರಿಕೆಟ್ನಲ್ಲಿ ಅತಿ ದೊಡ್ಡ ಗೆಲುವಾಗಿದೆ. ಒಟ್ಟಾರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ಗೆಲುವಾಗಿದೆ. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 172 ರನ್‌ಗಳ ಅಂತರದಿಂದ ಗೆದ್ದಿರುವುದು ಅತಿ ದೊಡ್ಡ ಜಯವಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳು
39 – ನೆದರ್ಲೆಂಡ್ಸ್ – ಶ್ರೀಲಂಕಾ ವಿರುದ್ಧ, ಚಟ್ಟೋಗ್ರಾಮ್ -2014
39 – ಉಗಾಂಡ – ವೆಸ್ಟ್ ಇಂಡೀಸ್ ವಿರುದ್ಧ, ಪ್ರಾವಿಡೆನ್ಸ್ -2024
44 – ನೆದರ್ಲೆಂಡ್ಸ್ – ಶ್ರೀಲಂಕಾ ವಿರುದ್ಧ, ಶಾರ್ಜಾ, 2021
55 – ವೆಸ್ಟ್ ಇಂಡೀಸ್ -ಇಂಗ್ಲೆಂಡ್ ವಿರುದ್ಧ, ದುಬೈ, 2021
58 – ಉಗಾಂಡ – ಅಫ್ಘಾನಿಸ್ತಾನ ವಿರುದ್ಧ, ಗಯಾನಾ, 2024
