ಟಿ20 ಕ್ರಿಕೆಟ್ ಯಾವಾಗಲೂ ಬೌಲರ್‌ಗಳಿಗೆ ದುಸ್ವಪ್ನ, ಬ್ಯಾಟರ್‌ಗಳಿಗೆ ಹಬ್ಬ. ಚುಟುಕು ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಲು ಅಂತಿಮ ಎಸೆತದವರೆಗೂ ಕಾಯಬೇಕು ಎಂಬುದು ಬಹಳಷ್ಟು ಬಾರಿ ನಿರೂಪಿತವಾಗಿದೆ. ಇದೀಗ, ತಮಿಳುನಾಡಿನಲ್ಲಿ ನಡೆದ ಟಿ20 ಪಂದ್ಯವೊಂದು ʻದುಬಾರಿ ಕೊನೆಯ ಎಸೆತʼದಲ್ಲಿ ʻವಿಶ್ವ ದಾಖಲೆʼ ಬರೆದಿದೆ. ಬೌಲರ್ ಓರ್ವ ಒಂದೇ ಎಸೆತದಲ್ಲಿ ಬರೋಬ್ಬರಿ 18 ರನ್ ಬಿಟ್ಟುಕೊಡುವ ಮೂಲಕ ಅಪರೂಪದ ʻಅನಗತ್ಯ ದಾಖಲೆʼ ಬರೆದಿದ್ಧಾನೆ.
ಎದುರಾಳಿ ತಂಡಕ್ಕೆ ವಿಶ್ವ ದಾಖಲೆಯ ರನ್ ಬಿಟ್ಟುಕೊಟ್ಟ ಬೌಲರ್ ಹೆಸರು ಅಭಿಷೇಕ್ ತನ್ವಾರ್. ವೇದಿಕೆಯಾಗಿದ್ದು ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್).
ಟಿಎನ್‌ಪಿಎಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ ಪಂದ್ಯ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಯಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಚೆಪಾಕ್ ಸೂಪರ್ ಗಿಲ್ಲಿಸ್, 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿತ್ತು. ಸೇಲಂ ಸ್ಪಾರ್ಟನ್ಸ್ ಪರವಾಗಿ ಅಂತಿಮ ಓವರ್ ಎಸೆಯಲು ಬಂದ ತಂಡದ ನಾಯಕ ಅಭಿಷೇಕ್ ತನ್ವಾರ್, ಮೊದಲ 5 ಎಸೆತಗಳಲ್ಲಿ 8 ರನ್ ಬಿಟ್ಟುಕೊಟ್ಟಿದ್ದರು. ಆದರೆ ನಂತರದ ಒಂದು ಎಸೆತದಲ್ಲಿ ಅವರು ಬರೋಬ್ಬರಿ 18 ರನ್ ಬಿಟ್ಟುಕೊಡುವ ಮೂಲಕ ಮುಜುಗರ ಅನುಭವಿಸಿದರು.
ಅಂತಿಮ ಎಸೆತದಲ್ಲಿ ಅಭಿಷೇಕ್ ಕ್ರಮವಾಗಿ, 1(ನೋಬಾಲ್), 7(ನೋಬಾಲ್), 3(ನೋಬಾಲ್), 1(ವೈಡ್), ಹಾಗೂ ಕೊನೆಯದಾಗಿ ಸಿಕ್ಸರ್ ಹೊಡೆಸಿಕೊಳ್ಳುವುದರೊಂದಿಗೆ ಒಟ್ಟು 26 ರನ್ ಬಿಟ್ಟುಕೊಟ್ಟು ಓವರ್ ಮುಗಿಸಿದರು. ಪಂದ್ಯದಲ್ಲಿ ಒಟ್ಟು 4 ಓವರ್ ಎಸೆದ ಅಭಿಷೇಕ್ 44 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.
ಈ ಸುದ್ದಿ ಓದಿದ್ದೀರಾ?: ದ್ವಿಪಕ್ಷೀಯ ಸರಣಿಗಳಲ್ಲಷ್ಟೇ ಭಾರತದ ಅಬ್ಬರ; ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ!
52 ರನ್‌ಗಳ ಅಂತರದಿಂದ ಗೆದ್ದ ಚೆಪಾಕ್
ಚೆಪಾಕ್ ಸೂಪರ್ ಗಿಲ್ಲಿಸ್ ಒಡ್ಡಿದ್ದ 218 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟುವ ವೇಳೆ ಸೇಲಂ ಸ್ಪಾರ್ಟನ್ಸ್, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 52 ರನ್‌ಗಳ ಅಂತರದಲ್ಲಿ ಚೆಪಾಕ್ ತಂಡಕ್ಕೆ ಶರಣಾಯಿತು.