- ಮುರಿಯದ ಮೂರನೇ ವಿಕೆಟ್ಗೆ 233 ರನ್ ಕಲೆ ಹಾಕಿದ ಕೊಹ್ಲಿ-ರಾಹುಲ್ ಜೋಡಿ
- ಪಾಕಿಸ್ತಾನಕ್ಕೆ ಗೆಲ್ಲಲು 357 ರನ್ಗಳ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ
ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಟೀಕಾಕಾರರಿಂದ ಟೀಕೆಗೆ ಒಳಗಾಗಿದ್ದ ಕನ್ನಡಿಗ ಕೆ ಎಲ್ ರಾಹುಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ‘ಕಮ್ ಬ್ಯಾಕ್’ ಮಾಡಿದ್ದಾರೆ.
ಕೆ ಎಲ್ ರಾಹುಲ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ಶತಕ ಬಾರಿಸಿದ್ದು, ತನ್ನ ಬ್ಯಾಟಿಂಗ್ ಬಗ್ಗೆ ಟೀಕಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.
ನಿನ್ನೆ (ಸೆಪ್ಟೆಂಬರ್ 10) ಕೊಲೊಂಬೋದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನದ ಏಷ್ಯಾ ಕಪ್ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಸೂಪರ್-4 ಹಂತದ ನಿನ್ನೆಯ ಪಂದ್ಯವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿತ್ತು. ಪಂದ್ಯ ನಿಲ್ಲುವ ಹೊತ್ತಿಗೆ ಭಾರತ 147/2 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ (ಅಜೇಯ 8) ಮತ್ತು ಕೆ.ಎಲ್. ರಾಹುಲ್ (ಅಜೇಯ 17) ರನ್ ಗಳಿಸಿದ್ದರು.
ಇಂದು ಬ್ಯಾಟಿಂಗ್ ಆರಂಭಿಸಿದ ಈ ಜೋಡಿ ಮುರಿಯದ ಮೂರನೇ ವಿಕೆಟ್ಗೆ 233 ರನ್ ಕಲೆ ಹಾಕಿತು.
ಕೆ ಎಲ್ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ನ ನೆರವಿನಿಂದ 111 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಮೂರು ಸಿಕ್ಸ್, 9 ಬೌಂಡರಿಗಳ ನೆರವಿನಿಂದ 122 ರನ್ ಬಾರಿಸಿ, ಔಟಾಗದೆ ಉಳಿದರು. ಆ ಮೂಲಕ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ 357 ರನ್ಗಳ ಬೃಹತ್ ಗುರಿ ನೀಡಿದೆ.