ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಮಿಲಿಟರಿ ಸಂಘರ್ಷ ನಡೆಯುತ್ತಿರುವ ಕಾರಣ ಭಾರತೀಯ ಕ್ರಿಕೆಟ್ ಮಂಡಳಿಯು ಐಪಿಎಲ್‌ನ ಉಳಿದ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಿದೆ. ಈ ನಡುವೆ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಇಂಗ್ಲೆಂಡ್ ತನ್ನ ದೇಶದಲ್ಲಿ ಆಯೋಜಿಸಲು ಮುಂದೆ ಬಂದಿದೆ.
ಇಸಿಬಿ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಅವರು ಐಪಿಎಲ್ 2025 ರ ಉಳಿದ ಪಂದ್ಯಗಳನ್ನು ಆಯೋಜಿಸಲು ಬಯಸಿದ್ದಾರೆ. “ನಾವು ಬಿಸಿಸಿಐಗೆ ಸಹಾಯ ಮಾಡಲು ಸಿದ್ಧರಿದ್ದೇವೆ” ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ವಾಯುದಾಳಿ ಅಲರ್ಟ್ ಇದ್ದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಧರ್ಮಶಾಲಾದಲ್ಲಿ ಮೇ 8ರಂದು ನಡೆಯುತ್ತಿದ್ದ ಪಂದ್ಯವನ್ನು ಏಕಾಏಕಿ ರದ್ದು ಮಾಡಲಾಗಿದೆ. ಮರುದಿನ ಅಂದರೆ ಮೇ 9ರಂದು ಪರಿಸ್ಥಿತಿಯನ್ನು ಮರುಪರಿಶೀಲಿಸಿದ ನಂತರ ಮತ್ತು ಫ್ರಾಂಚೈಸಿಗಳು, ಪಾಲುದಾರರೊಂದಿಗೆ ಮಾತನಾಡಿದ ನಂತರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2025 | 2 ಪಂದ್ಯ ಸೋತ ಡೆಲ್ಲಿಗೆ ಬೇಕಿದೆ ಗೆಲುವು; ಮಹತ್ವದ ದಾಖಲೆಯ ಹೊಸ್ತಿಲಲ್ಲಿ ರಾಹುಲ್
ಧರ್ಮಶಾಲಾದಲ್ಲಿ ರದ್ದುಗೊಂಡ ಪಂದ್ಯವೂ ಸೇರಿದಂತೆ ಒಟ್ಟು 17 ಪಂದ್ಯಗಳು ನಡೆಯಲು ಬಾಕಿ ಇದ್ದು ಬಾಕಿ ಉಳಿದ ಪಂದ್ಯಗಳವನ್ನು ಭಾರತದಲ್ಲೇ ನಡೆಸುವುದೋ ಅಥವಾ ವಿದೇಶದಲ್ಲಿ ನಡೆಸುವುದೋ ಎಂಬ ಬಗ್ಗೆ ಬಿಸಿಸಿಐ ಇನ್ನೂ ತೀರ್ಮಾನಿಸಿಲ್ಲ.
ಐಪಿಎಲ್ ಅನ್ನು ಇಂಗ್ಲೆಂಡ್‌ಗೆ ಸ್ಥಳಾಂತರಿಸುವುದರಿಂದ ನಾಲ್ಕು ದೇಶಗಳ ಟೆಸ್ಟ್ ಆಟಗಾರರಿಗೆ ಅನುಕೂಲವಾಗುತ್ತದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು ಸಹ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು ಸಹಾಯವಾಗುತ್ತದೆ. ಇಂಗ್ಲೆಂಡ್ ಆಟಗಾರರು ಈಗಾಗಲೇ ವಾಪಸ್ ಹೊರಟಿದ್ದಾರೆ. ಬಿಸಿಸಿಐ ವಿದೇಶಿ ಆಟಗಾರರಿಗೆ ಮರಳಲು ಸಿದ್ಧರಾಗಿರಲು ಸೂಚಿಸಿದೆ.
ವರದಿಯ ಪ್ರಕಾರ, ಇಂಗ್ಲೆಂಡ್‌ನಲ್ಲಿ ಐಪಿಎಲ್ 2025 ರ ಉಳಿದ ಪಂದ್ಯಗಳನ್ನು ಆಡಿದರೆ, ಟೆಸ್ಟ್ ಆಟಗಾರರಿಗೆ ಅನುಕೂಲವಾಗುತ್ತದೆ. ಏಕೆಂದರೆ ಅವರು ಬೆನ್ ಸ್ಟೋಕ್ಸ್ ನಾಯಕತ್ವದ ತಂಡದ ವಿರುದ್ಧದ ಐದು ಟೆಸ್ಟ್ ಸರಣಿಗಾಗಿ ಅಲ್ಲೇ ಉಳಿಯಬಹುದು. ಇದರ ಜೊತೆಗೆ, ಕೆಲವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು ಸಹ ಇಂಗ್ಲೆಂಡ್‌ನಲ್ಲಿ ಉಳಿಯಬಹುದು. ಏಕೆಂದರೆ ಅವರು ಜೂನ್ 11 ರಿಂದ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ಫೈನಲ್‌ಗೆ ಸಿದ್ಧರಾಗುತ್ತಾರೆ.
ಈ ಹಿಂದೆ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣ 2009 ರಲ್ಲಿ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ 2020 ರಲ್ಲಿ, ಐಪಿಎಲ್ ಅನ್ನು ಯುಎಇ ಆಯೋಜಿಸಿತ್ತು. 2021 ರಲ್ಲಿ, ಕೋವಿಡ್ ಸಂಭವಿಸಿದ ಕಾರಣ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.