ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಈಗಾಗಲೇ ಈ ಸರಣಿಯನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ವೇಗಿ ಜಸ್ಪ್ರೀತ್ ಬೂಮ್ರಾ ಕೊನೆಯ ಟೆಸ್ಟ್ನಿಂದ ಹೊರಗುಳಿದಿದ್ದಾರೆ.
ಕಿವೀಸ್ ತಂಡ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಾಗಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್‌ನಿಂದ ಪಾರಾಗಲು ಪ್ರಯತ್ನಿಸಲಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್‌ಗಳಿಂದ ಮತ್ತು ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 113 ರನ್‌ಗಳಿಂದ ಗೆದ್ದಿತ್ತು. ಇದೀಗ ಮೂರನೇ ಟೆಸ್ಟ್ ಗೆಲ್ಲುವುದರೊಂದಿಗೆ ಟೂರ್ನಿಗೆ ವಿದಾಯ ಹೇಳುವುದಕ್ಕೆ ಉಭಯ ತಂಡಗಳು ಸಜ್ಜಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು?
ಕಿವೀಸ್ ನಾಯಕ ಲೇಥಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ತೊಂದರೆ ನೀಡಿದ್ದ ಮಿಚೆಲ್ ಸ್ಯಾಂಟ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ ಇಶ್ ಸೋಧಿ ಅವರನ್ನು ಸೇರಿಸಲಾಗಿದೆ. ಅದೇ ಸಮಯದಲ್ಲಿ, ಟಿಮ್ ಸೌಥಿ ಬದಲಿಗೆ ಮ್ಯಾಟ್ ಹೆನ್ರಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾ ಕೂಡ ತನ್ನ 11ರ ಬಳಗದಲ್ಲಿ ಬದಲಾವಣೆ ಮಾಡಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡಲಾಗಿದೆ.
ಪಂದ್ಯವಾಡುವ 11ರ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ : ಟಾಮ್ ಲೇಥಮ್ (ನಾಯಕ), ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್, ವಿಲಿಯಂ ಓ’ರೂರ್ಕ್.
