ಬೌಲರ್ಗಳಾದ ಅಕೆಲ್ ಹೊಸೈನ್(16), ಅಲ್ಜಾರಿ ಜೋಸೆಫ್(10) ಅವರ ತಾಳ್ಮೆಯ ಬ್ಯಾಟಿಂಗ್ ಹಾಗೂ ನಿಕೋಲಸ್ ಪೂರನ್ (67) ಭರ್ಜರಿ ಅರ್ಧ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿತು.
ಟೀಂ ಇಂಡಿಯಾ ನೀಡಿದ 153 ರನ್ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 18.5 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯ ಪಡೆಯಿತು. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಅತಿಥೇಯ ತಂಡ 2-0 ಮುನ್ನಡೆ ಸಾಧಿಸಿದೆ.
ಆರಂಭದಲ್ಲೇ ವೆಸ್ಟ್ ಇಂಡೀಸ್ಗೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪ್ರಮುಖ ಮೂರು ವಿಕೆಟ್ ಕಬಳಿಸಿ ಆಘಾತ ನೀಡಿದರು. ಪ್ರಮುಖ ಬ್ಯಾಟರ್ಗಳಾದ ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ ಹಾಗೂ ಜಾನ್ಸನ್ ಚಾರ್ಲ್ಸ್ ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ನಿಕೋಲಸ್ ಪೂರನ್ ಹಾಗೂ ನಾಯಕ ರೋವ್ಮನ್ ಪೊವೆಲ್ ಆಟದಿಂದ ವೆಸ್ಟ್ ಇಂಡೀಸ್ ಚೇತರಿಸಿಕೊಂಡಿತು.
ಪೊವೆಲ್ 21 ರನ್ ಬಾರಿಸಿ ನಿರ್ಗಮಿಸಿದರು. ಆದರೆ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ವಿಂಡೀಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಪೂರನ್ ಹಾಫ್ ಅರ್ಧ ಶತಕ ಸಿಡಿಸಿ ಮಿಂಚಿದರು. 40 ಎಸೆತದಲ್ಲಿ 4 ಸಿಕ್ಸರ್, 6 ಬೌಂಡರಿಗಳೊಂದಿಗೆ 67 ರನ್ ಸಿಡಿಸಿ ಪೂರನ್ ನಿರ್ಗಮಿಸಿದರು.
ಪೂರನ್ ಆಟದಿಂದ ವಿಂಡೀಸ್ ಸುಲಭ ಗೆಲುವಿನತ್ತ ದಾಪುಗಾಲಿಟ್ಟಿತು. ಆದರೆ ಮುಖೇಶ್ ಕುಮಾರ್ ಬೌಲಿಂಗ್ನಲ್ಲಿ ಪೂರನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು.
ಈ ಸುದ್ದಿ ಓದಿದ್ದೀರಾ? ಟಿ20: ಭಾರತದ ವಿರುದ್ಧ ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್
ರೋಮಾರಿಯೋ ಶೆಫರ್ಡ್ ರನ್ಔಟ್ ಆದರೆ, ಜೇಸನ್ ಹೋಲ್ಡರ್ ಶೂನ್ಯಕ್ಕೆ ನಿರ್ಗಮಿಸಿದರು. ಶಿಮ್ರೊನ್ ಹೆಟ್ಮೆಯರ್ 22 ರನ್ ಔಟಾದರು. ಈ ಮೂಲಕ ವಿಂಡೀಸ್ ಗೆಲುವಿಗೆ ಅಂತಿಮ 24 ಎಸೆತದಲ್ಲಿ 24 ರನ್ ಅವಶ್ಯಕತೆ ಇತ್ತು. ಇತ್ತ ಭಾರತ ಪ್ರಮುಖ 8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭಾರತದ ಗೆಲುವಿಗೆ ಕೇವಲ 2 ವಿಕೆಟ್ ಅವಶ್ಯಕತೆ ಇತ್ತು.
ಅಕೆಲ್ ಹುಸೈನ್ ಹಾಗೂ ಅಲ್ಜಾರಿ ಜೊಸೆಫ್ ತಾಳ್ಮೆಯ ಹೋರಾಟದಿಂದ ಪಂದ್ಯ ವಿಂಡೀಸ್ ಕಡೆ ವಾಲಿತು. 18.5 ನೇ ಓವರ್ನಲ್ಲಿ ಅಕೀಲ್ ಹುಸೈನ್ ಬೌಂಡರಿ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ 2 ವಿಕೆಟ್ ರೋಚಕ ಗೆಲುವು ಪಡೆಯಿತು.
ಭಾರತದ ಬ್ಯಾಟಿಂಗ್ ಮತ್ತೆ ವಿಫಲ
ಟಾಸ್ ಗೆದ್ದ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲಗೊಂಡಿತು. ತಿಲಕ್ ವರ್ಮಾ ಸಿಡಿಸಿದ ಅರ್ಧಶಕ ನೆರವಿನಿಂದ 152 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಇಶಾನ್ ಕಿಶನ್ 27 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರ 24 ರನ್ ಹೊರತುಪಡಿಸಿದರೆ, ಉಳಿದ ಬ್ಯಾಟ್ಸಮನ್ಗಳು ಮತ್ತೆ ವೈಫಲ್ಯ ಕಂಡರು.
ಶುಭಮನ್ ಗಿಲ್ ಕೇವಲ 7 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 1 ರನ್ಗೆ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ 7 ರನ್ನೊಂದಿಗೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಭಾರತ 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತು.