ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೆರ್ರಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಈ ಇತಿಹಾಸ ಸೃಷ್ಟಿಸಿದ್ದಾರೆ.
43 ಎಸೆತಗಳನ್ನು ಎದುರಿಸಿದ ಎಲ್ಲಿಸ್ ಪೆರ್ರಿ ಎರಡು ಸಿಕ್ಸ್ ಮತ್ತು 11 ಫೋರ್ ಗಳೊಂದಿಗೆ 81 ರನ್ ಚಚ್ಚಿದರು. ಈ ಮೂಲಕ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700 ಗಡಿ ದಾಟುವ ಮೂಲಕ ಹೆಚ್ಚು ರನ್ ಮಾಡಿರುವ ಸಾಧನೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700+ ರನ್ಸ್ ಹಾಗೂ 10+ ವಿಕೆಟ್ ಪಡೆದ ಏಕೈಕ ಆಟಗಾರ್ತಿಯೂ ಎನಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಈವರೆಗೆ 20 ಪಂದ್ಯಗಳನ್ನಾಡಿರುವ ಎಲ್ಲಿಸ್ ಪೆರ್ರಿ 6 ಅರ್ಧಶತಕಗಳೊಂದಿಗೆ ಒಟ್ಟು 745 ರನ್ ಬಾರಿಸಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಡೆಲ್ಲಿ ಪರ 21 ಇನಿಂಗ್ಸ್ ಆಡಿರುವ ಲ್ಯಾನಿಂಗ್ 7 ಅರ್ಧಶತಕಗಳೊಂದಿಗೆ ಈವರೆಗೆ 777 ರನ್ ಕಲೆಹಾಕಿದ್ದಾರೆ. ಎಲ್ಲಿಸ್ ಪೆರ್ರಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.