ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮತ್ತು ನಟಿ ಧನಶ್ರೀ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ.
ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ಅಂತಿಮ ವಿಚ್ಛೇದನದ ವಿಚಾರಣೆ ನಡೆಯಿತು. ಚಹಲ್ ಮತ್ತು ಧನಶ್ರೀ ಇಬ್ಬರೂ ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯವು ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯ ಮೂಲಕ ವಿವಾಹ ವಿಚ್ಛೇದನ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ತಮ್ಮ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಚಹಲ್ ಮತ್ತು ಧನಶ್ರೀ ‘ಹೊಂದಾಣಿಕೆಯ ಸಮಸ್ಯೆ’ ಕಾರಣವನ್ನು ನೀಡಿದ್ದಾರೆ. ಪ್ರಕರಣವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ನ್ಯಾಯಾಧೀಶರು ಸಂಜೆ 4.30ಕ್ಕೆ ಅಧಿಕೃತವಾಗಿ ಅವರ ವಿಚ್ಛೇದನ ತೀರ್ಪು ಪ್ರಕಟಿಸಿದರು.
ಕೆಲ ದಿನಗಳಿಂದ ಇಬ್ಬರೂ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಯಾಗುತ್ತಿತ್ತು. ಆದರೆ ಅಧಿಕೃತವಾಗಿ ಇಬ್ಬರೂ ತಿಳಿಸಿರಲಿಲ್ಲ. ವಿಚ್ಛೇದನ ಪಡೆದ ನಂತರ ಚಹಲ್ ಕೈಮಗಿಯುತ್ತಿರುವ ಹನುಮಂತನ ಚಿತ್ರ ಪ್ರಕಟಿಸಿದ್ದರೆ ಧನಶ್ರೀ ಇನ್‌ಸ್ಟಾದಲ್ಲಿ ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.
ಇನ್‌ಸ್ಟಾದಲ್ಲಿ ಚಹಲ್ ದೇವರು ನನ್ನನ್ನು ಎಷ್ಟೋ ಬಾರಿ ಕಾಪಾಡಿದ್ದಾನೆ. ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ತಿಳಿಯದೇ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಅಮೆರಿಕಗೆ ತಿರುಗುಬಾಣವಾದ ಯುಎಸ್‌ಏಡ್ ಎಂಬ ಗುಪ್ತ ಕಾರ್ಯಸೂಚಿ!
ಧನಶ್ರೀ ಅವರು ಒತ್ತಡದಿಂದ ಅದೃಷ್ಟಶಾಲಿಯಾಗುವವರೆಗೆ, ದೇವರು ನಮ್ಮ ಒತ್ತಡವನ್ನು ಸಂತೋಷವಾಗಿ ಪರಿವರ್ತಿಸುವ ರೀತಿ ಎಷ್ಟು ಅದ್ಭುತವಾಗಿದೆ? ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೆ ಒಳಗಾದರೆ ಹೆಚ್ಚು ಯೋಚಿಸುತ್ತಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ನೆನಪಿಡಿ. ನೀವು ಆ ಉದ್ವೇಗವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಎಲ್ಲ ಚಿಂತೆಗಳನ್ನು ದೇವರಿಗೆ ಅರ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಬಹುದು. ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಮಾಡಬಹುದು ಎಂದು ನಂಬುವುದರಲ್ಲಿ ಬೇರೆಯದೇ ರೀತಿಯ ಶಕ್ತಿಯಿದೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಇಬ್ಬರೂ ಇನ್‌ಸ್ಟಾದಲ್ಲಿ ಪರಸ್ಪರ ಅನ್‌ಫಾಲೋ ಆಗಿದ್ದರು. ಆಗಲೇ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ವರದಿಯಾಗಿತ್ತು. ಇನ್‌ಸ್ಟಾದಲ್ಲಿ ಚಹಲ್ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದರೆ, ಧನಶ್ರೀ ಅವರು ಚಹಲ್ ಅವರೊಂದಿಗೆ ಫೋಟೋ ಡಿಲೀಟ್ ಮಾಡಿಲ್ಲ. ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು.
ಸದ್ಯ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಚಹಲ್ ವಿಫಲರಾಗಿದ್ದು 2023ರ ಜನವರಿಯಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದರೆ. 2023ರ ಆಗಸ್ಟ್‌ನಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು.
ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ 18 ಕೋಟಿ ರೂ. ನೀಡಿ ಚಹಲ್ ಅವರನ್ನು ಖರೀದಿಸಿತ್ತು. ಚಹಲ್ 160 ಐಪಿಎಲ್ ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.