ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಇಂದು ಎಲ್ಲಾ ಅಂಗನವಾಡಿ ಪ್ರಾಥಮಿಕ- ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಜೆ ಘೋಷಣೆ ಮಾಡಿದ್ದರು.
ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಭಾರೀ ಮಳೆಯೊಂದಿಗೆ 40-50ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾದರೆ, ಕರ್ನಾಟಕದ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ಭಾರಿ ಗಾಳಿ ಮಳೆಗೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ದೇವಭಾಗದಲ್ಲಿ ಕಡಲ ಕೊರೆತ ಜೋರಾಗಿದ್ದು,ಜಂಗಲ್ ಲಾಡ್ಜಸ್‌ಗೆ ಸೇರಿದ ದೇವಭಾಗ ಬೀಚ್ ರೆಸಾರ್ಟ್‌ನ 4 ಕಾಟೇಜ್‌ಗಳಿಗೆ ಹಾನಿಯಾಗಿದೆ. 18 ಕಾಟೇಜ್‌ಗಳಿದ್ದ ದೇವಭಾಗ್ ಬೀಚ್ ರೆಸಾರ್ಟ್‌ನಲ್ಲಿ ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ನೆಲಸಮವಾಗಿದ್ದು, ಪರಿಣಾಮ 1 ಕೋಟಿಗೂ ಅಧಿಕ ಹಾನಿಯಾಗಿದೆ.
ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದು, ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ರಣಭೀಕರ ಮಳೆಯಿಂದಾಗಿ ಸಾವು-ನೋವುಗಳು ಸಂಭವಿಸುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆ ಅವಾಂತರಕ್ಕೆ 7 ಜನರು ಬಲಿಯಾಗಿದ್ದಾರೆ.
ಉಳ್ಳಾಲ ತಾಲೂಕಿನ ಕುತ್ತಾರುವಿನ ಮದನಿನಗರದಲ್ಲಿ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಮಂಗಳೂರಿನ ರೊಸಾರಿಯೋ ಶಾಲೆ ಹಿಂಭಾಗ ವಿದ್ಯುತ್ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದರು. ಇದೇ ವೇಳೆ ಬೆಳ್ತಂಗಡಿಯ ಶಿಬಾಜೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.
ಶಿಬಾಜೆ ಗ್ರಾಮದ ಬರ್ಗುಳ ನಿವಾಸಿ ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಮೃತ ಪ್ರತೀಕ್ಷಾ ಶೆಟ್ಟಿ (21) ಕೊಕ್ಕಡದಲ್ಲಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ರಸ್ತೆ ಸಮೀಪ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಿದ್ದ ಪ್ರತೀಕ್ಷಾಗೆ ಈ ವೇಳೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್‌ನಿಂದ ಆಘಾತವಾಗಿದೆ. ಸ್ಥಳದಲ್ಲಿದ್ದ ತಂದೆ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ರಕ್ಷಿಸಲು ಆಗಲಿಲ್ಲ. ತಂದೆಗೂ ವಿದ್ಯುತ್ ಆಘಾತವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಟೇ ವಯರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಅದು ನೀರಿಗೆ ಪ್ರವಹಿಸಿದೆ. ವಿದ್ಯುತ್ ಶಾಕ್‌ಗೊಳಗಾದ ಪ್ರತೀಕ್ಷಾರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ತಣ್ಣಗಾದ ವರುಣ
ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಇಂದು ತಗ್ಗಿದ್ದು ಬಿಸಿಲು ಕಾಣಿಸಿಕೊಂಡಿತ್ತು. ಜೂನ್ 26, 27 ರಂದು ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ನದಿ ತೀರಾ ಪ್ರದೇಶಗಳು ನೆರೆ ಭೀತಿ ಎದುರಿಸಿದ್ದವು. ಶುಕ್ರವಾರ ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಕೊಂಚ ಇದ್ದರೂ ಮಳೆಗೆ ಬ್ರೇಕ್ ಬಿದ್ದು ಬಿಸಿಲು ಕಾಣಿಸಿದೆ. ತಗ್ಗು ಪ್ರದೇಶಗಳಲ್ಲಿ ನಿಂತಿದ್ದ ನೀರು ಇಂಗಿದ್ದು ಸದ್ಯದ ಮಟ್ಟಿಗೆ ನೆರೆ ಭೀತಿ ದೂರವಾಗಿದೆ.
ಚಿಕ್ಕಮಗಳೂರು: ಕಳಸ ಶಾಲೆಗಳಿಗೆ ರಜೆ
ಮೂಡಿಗೆರೆ: ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದ ಪರಿಣಾಮ ಶುಕ್ರವಾರ ಕಳಸ ತಾಲೂಕಿನ ಶಾಲೆಗಳಿಗೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದರು.
ಬೆಳಗ್ಗಿನವರೆಗೂ ರಜೆಯ ಯಾವುದೇ ಸೂಚನೆ ಇರದ ಕಾರಣ ಮಕ್ಕಳು ಬೆಳಿಗ್ಗೆ ಶಾಲೆಗಳಿಗೆ ತೆರಳಿದ್ದಾರೆ. ಈ ವೇಳೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಶಾಲೆಯಿಂದ ವಾಪಸ್ಸಾಗಿದ್ದಾರೆ.
ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ
ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವುದರಿಂದ ದಿನಾಂಕ 15-09-2024ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಅಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿರುವುದರಿಂದ ತೀರ್ಥಹಳ್ಳಿಯಿಂದ ಉಡುಪಿಗೆ ತೆರಳುವ ಭಾರೀ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ, ಸಿದ್ಧಾಪುರ, ಕುಂದಾಪುರ, ಉಡುಪಿಗೆ ತೆರಳುವುದು. ಉಡುಪಿಯಿಂದ ತೀರ್ಥಹಳ್ಳಿಗೆ ಉಡುಪಿ, ಕುಂದಾಪುರ, ಸಿದ್ಧಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಅವರು ತಿಳಿಸಿದ್ದಾರೆ.
ನದಿಗೆ ಬಿದ್ದು ಕೊಚ್ಚಿ ಹೋದ ಕಾರು; ಇಬ್ಬರು ಪಾರು
ಕಾಸರಗೋಡು: ಕರ್ನಾಟಕದ ಮತ್ತು ಕೇರಳದ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅನಾಹುತಗಳೂ ವರದಿಯಾಗುತ್ತಿದೆ. ಮಳೆಗೆ ಚಾಲಕನ ನಿಯಂತ್ರ ತಪ್ಪಿದ ಕಾರೊಂದು ಸೇತುವೆಯಿಂದ ನದಿಗೆ ಬಿದ್ದು, ನೀರಲ್ಲಿ ಕೊಚ್ಚಿಕೊಂಡು ಹೋದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಟ್ಟಿಕೋಲ್ ಬಳಿಯ ಪಲ್ಲಂಚಿಯಲ್ಲಿ ಮುಂಜಾನೆ ಈ ಘಟನೆ ನಡೆದಿದೆ. ತಡೆಗೋಡೆ ಇಲ್ಲದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ನದಿಗೆ ಹಾರಿದೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದ ಕಾಂಞಂಗಾಡ್ ಮೂಲದ ಅಬ್ದುಲ್ ರಶೀದ್ ಹಾಗೂ ತಸ್ರೀಫ್ ಮರಗಳ ಕೊಂಬೆಗಳನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಇಬ್ಬರನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
