POCSO ಕಾಯ್ದೆಯಡಿ ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿ ಮೂರು ತಿಂಗಳಾದರೂ ಇದುವರೆಗೂ ಬಂಧಿಸಿಲ್ಲ. ಇದೀಗ ಹೈಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ. ಸರ್ಕಾರ ಕುಂಟು ನೆಪ ಹೇಳದೇ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂಬ ಒತ್ತಾಯ ಜೋರಾಗಿದೆ.
ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯ ಬಂಧನವಾಗಬೇಕು. ಆದರೆ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಬಲಾಢ್ಯರು, ರಾಜಕಾರಣಿಗಳ ಮೇಲೆ ದಾಖಲಾಗುವ ಪ್ರಕರಣಗಳಲ್ಲಿ ಕಾಯ್ದೆಯನ್ವಯ ಕ್ರಮ ಜರುಗಿಸದೇ ಲೋಪ ಎಸಗುತ್ತಿದ್ದಾರೆ. ಪರೋಕ್ಷವಾಗಿ ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ, ಬಿ ಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ POCSO ಪ್ರಕರಣ ಸಂಬಂಧ ಯಾವುದೇ ಕ್ರಮ ಜರುಗಿಸದ ರಾಜ್ಯ ಸರ್ಕಾರದ ವಿರುದ್ಧ ಪ್ರಗತಿಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.
ಎರಡು ವರ್ಷಗಳ ಹಿಂದೆ ಮುರುಘಾ ಮಠದ ಸ್ವಾಮಿಯ ಮೇಲೆ ದೂರು ದಾಖಲಾದ ವಾರದ ನಂತರ ಬಂಧಿಸಲಾಗಿತ್ತು. ಈದೀಗ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿ ಮೂರು ತಿಂಗಳಾದರೂ ಯಾವುದೇ ಕ್ರಮ ಜರುಗಿಸಿಲ್ಲ. ಸಂತ್ರಸ್ತ ಬಾಲಕಿಯ ತಾಯಿ ದೂರುದಾರೆ ಮೃತಪಟ್ಟಿದ್ದಾರೆ. ಆಕೆಯ ಪುತ್ರ ಹೈಕೋರ್ಟ್ ಮೆಟ್ಟಿಲೇರಿ ಬಂಧನ ವಾರಂಟ್ ಜಾರಿ ಮಾಡಿಸಿಕೊಳ್ಳಬೇಕಾಯಿತು. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಉದಾಹರಣೆ. ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುವುದು ಅಕ್ಷಮ್ಯ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆʼಈ ದಿನ.ಕಾಮ್ʼ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಕೆ. ಎಸ್ ವಿಮಲಾ ಅವರು, “ನೆಲದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಆದರೆ, ಈ ನೆಲ ಕೆಲವು ವೇಳೆ ಮಳೆಗೇ ಒದ್ದೆಯಾಗಲು ನಿರಾಕರಿಸುತ್ತದೆ. ಇನ್ನು ಕಣ್ಣೀರೊಂದು ಲೆಕ್ಕವೇ? ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಹೀನಾತಿ ಹೀನ ಕೃತ್ಯ ತಡೆಯುವ ಸಲುವಾಗಿ ಬಂತು ಪೋಕ್ಸೋ. ಅದು ಹೀನಾತಿ ಹೀನ ಎಂಬ ಕಾರಣಕ್ಕಾಗಿಯೇ ಅದು ಜಾಮೀನು ರಹಿತ. ಆದರೆ, ಅದರಡಿ ಪ್ರಕರಣ ದಾಖಲಾದಾಗಲೂ ತಪ್ಪಿಸಿಕೊಳ್ಳುವ ಮತ್ತು ಯಾವ ಲಜ್ಜೆ ಮುಜುಗರವಿಲ್ಲದೆಯೇ ಸಾರ್ವಜನಿಕರ ಮುಂದೆ ಹೋಗಿ ಮತಯಾಚನೆ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತವರ ಪಕ್ಷದ ಎಲ್ಲರಿಗೂ ಯಾವ ಹೆಸರಿಟ್ಟು ಕರೆಯಬಹುದು?
ಕರ್ನಾಟಕ ಸರಕಾರ ಕೂಡಾ ಇಂತಹ ಪ್ರಕರಣಗಳ ಕುರಿತು ಯಾವ ಗಂಭೀರತೆಯನ್ನೂ ವಹಿಸದೇ ಇರುವುದು, ಮಾರ್ಚ್ 2024 ರಲ್ಲಿ ಪ್ರಕರಣ ದಾಖಲಾಗಿದೆಯಾದರೂ ಇದುವರೆಗೂ ಬಂಧಿಸದಿರುವುದು, ಸ್ವತಃ ಗೃಹಮಂತ್ರಿಗಳು ಅತ್ಯಂತ ಸಡಿಲ ಹೇಳಿಕೆ ನೀಡುವುದು, ಪ್ರತಿನಿತ್ಯ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದರೂ ಅದು ಯಾರ ನಿದ್ದೆ ಕೆಡಿಸುತ್ತಿಲ್ಲ ಎಂಬುದು ಮಹಿಳೆಯರ ವಿಷಯಕ್ಕೆ ಈ ಎಲ್ಲ ಸಂದರ್ಭಗಳಲ್ಲಿ ನಡೆದು ಕೊಳ್ಳುತ್ತಿರುವ ರೀತಿಯಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಯಡಿಯೂರಪ್ಪ ದೆಹಲಿಗೆ ಹೋಗಿಬಿಡ್ತಾರೆ, ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರ್ತಾನೆ, ಎಚ್.ಡಿ. ರೇವಣ್ಣರಿಗೆ ಕಿಡ್ನಾಪ್ ಪ್ರಕರಣದಲ್ಲಿಯೂ ಜಾಮೀನು ಸಿಗುತ್ತದೆ, ಅದೇ ಪ್ರಕರಣ ದ ಆರೋಪಿ ಭವಾನಿ ರೇವಣ್ಣರಿಗೆ ನಿರೀಕ್ಷಣಾ ಜಾಮೀನು ಸಿಗುತ್ತದೆ. ಸಿಗುವ ವರೆಗೆ ಅವರು ಇಲ್ಲೇ ಇದ್ದೂ ಪೋಲೀಸರಿಗೆ ಕಾಣಿಸುವುದಿಲ್ಲ ಎಂದರೆ ಈ ನೆಲದ ಕಾನೂನು ಉಳ್ಳವರಿಗೊಂದು ಎಂಬುದೇ ಸತ್ಯವೇ?
ದೆಹಲಿಯಲ್ಲಿ ಇರುವ ಮಾತೃದೇವೋಭವ ಎನ್ನುವ ಬಿಜೆಪಿಗರಿಗೆ ಪೊಕ್ಸೋ ಆರೋಪಿ ತಲೆ ತಪ್ಪಿಸಿಕೊಂಡು ತಿರುಗುವುದು ಅವಮಾನಕರವಲ್ಲವೇ? ನೇಹಾ ಎನ್ನುವ ಮುದ್ದು ಕುವರಿಯ ಸಾವನ್ನೂ ರಾಜಕಾರಣಕ್ಕೆ ಬಳಸಿ ಬೊಬ್ಬಿರಿದ ಶೋಭಾ ಕರಂದ್ಲಾಜೆ ಮತ್ತಿತರ ಭಾಜಪ ನಾಯಕಿಯರಿಗೆ ಮಗಳ ಮೇಲಾದ ದೌರ್ಜನ್ಯದ ವಿರುದ್ಧ ಸೆಣಸುತ್ತಲೇ ಅಸಹಜ ಸಾವನ್ನಪ್ಪಿದ ದೂರುದಾರೆ ಮಹಿಳೆಯಂತೆ ಕಾಣುತ್ತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಸರ್ಕಾರವು ಯಾವ ಪಿಳ್ಳೆ ನೆವಗಳನ್ನೂ ಹೇಳದೇ ಬಂಧಿಸಲಿ: ರೂಪ ಹಾಸನ
ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೂಪ ಹಾಸನ ಅವರು ಮಾತನಾಡಿ,
“ಮಾರ್ಚ್ 14ರಂದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅವರ ಲೈಂಗಿಕ ದೌರ್ಜನ್ಯ ಸಂಬಂಧಿತ ಪುಟ್ಟ ವಿಡಿಯೋ ಕೂಡ ಸಾಕ್ಷ್ಯವಾಗಿ ಎಲ್ಲೆಡೆ ಹರಿದಾಡಿತ್ತು. ಸಂತ್ರಸ್ತ ಹೆಣ್ಣುಮಗುವಿನ ತಾಯಿಯಂತೂ ಇನ್ನಿಲ್ಲದಂತೆ ತನ್ನ ಮಗಳ ಮೇಲೆ ಹಿಂದೆ ಸಂಬಂಧಿಕ ವ್ಯಕ್ತಿಯಿಂದಲೇ ನಡೆದಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕುರಿತು ಎಲ್ಲೆಡೆ ಅಲವತ್ತುಕೊಂಡು, ನಿರಂತರವಾಗಿ ಫೇಸ್ ಬುಕ್ ಪೋಸ್ಟ್ ಹಾಕುತ್ತಿದ್ದರು. ಅವರು ವಿಪರೀತ ಒತ್ತಡದಲ್ಲಿ ಇದ್ದರೇನೋ, ಹೀಗಾಗಿ ಹಲವು ಮಂದಿ ಉನ್ನತಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧವಾಗಿಯೂ ಪ್ರಕರಣ ದಾಖಲಿಸಿದ್ದರೆಂದು ಹೇಳಲಾಗುತ್ತಿತ್ತು. ಬಹುಶಃ ಅವರ ಈ ರೀತಿಯ ವರ್ತನೆಯಿಂದಾಗಿಯೇ ಸಾರ್ವಜನಿಕರಿಗೆ ಈ ಪ್ರಕರಣದ ಸತ್ಯಾಸತ್ಯತೆ ಕುರಿತು ಅನುಮಾನಗಳು ಮೂಡಿತ್ತು.
ಆದರೆ ಈ ಮಗಳ ಮೇಲಿನ ಹಿಂದಿನ ದೌರ್ಜನ್ಯ ಪ್ರಕರಣದ ಕುರಿತು ವಿವರಿಸಿ, ನ್ಯಾಯ ಒದಗಿಸಬೇಕೆಂದು ಕೇಳಲೆಂದೇ ಆ ತಾಯಿ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿಯೇ ಆ ಹೆಣ್ಣುಮಗುವಿನೊಂದಿಗೆ ಅವರು ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾಗಿ ತಾಯಿ ಮತ್ತೆ ಮತ್ತೆ ಆಕ್ರೋಶದಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದರು. ಆ ಕುರಿತು ಸಂತ್ರಸ್ತೆಯ ತಾಯಿ, ಒಡನಾಡಿ ಸಂಸ್ಥೆಯವರಿಗೂ ಈ ಪ್ರಕರಣದ ಬಗ್ಗೆ ತಿಳಿಸಿದ್ದಾಗಿ ಮಾಹಿತಿ ಬಂದಿದ್ದರಿಂದ ನನಗೊಂದಿಷ್ಟು ಸಮಾಧಾನವಾಗಿತ್ತು.
ಪೋಕ್ಸೋ ಪ್ರಕರಣವಾದ್ದರಿಂದ, ಕೇಸ್ ದಾಖಲಾದೊಡನೆ ಯಡಿಯೂರಪ್ಪ ಅವರನ್ನು ಬಂಧಿಸಬೇಕಿತ್ತು. ಆದರೆ ಪೊಲೀಸ್ ನಿರ್ಲಕ್ಷ್ಯ ಮತ್ತು ಬಹುಶಃ ಸರ್ಕಾರವೂ ಚುನಾವಣೆ ಸಂದರ್ಭದಲ್ಲಿ ಈ ಕುರಿತ ರಗಳೆಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡವೆಂದೇನೋ ಅವರನ್ನು ಬಂಧಿಸದೇ ಉಳಿದದ್ದು ಅಕ್ಷಮ್ಯ. ಆಗಲೇ ಬಂಧಿಸಿ ವಿಚಾರಣೆ ನಡೆಸಿದ್ದರೆ ಸತ್ಯ ಹೊರಬರುತ್ತಿತ್ತು. ಇತ್ತೀಚಿಗೆ ಈ ಸಂತ್ರಸ್ತ ಹೆಣ್ಣುಮಗುವಿನ ತಾಯಿ ಅನಾರೋಗ್ಯದಿಂದ ಮೃತರಾದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದಾಗ, ಇನ್ನು ಈ ಮಗುವಿಗೆ ನ್ಯಾಯ ಮರೀಚಿಕೆಯೆಂದೇ ನಿಟ್ಟುಸಿರಿಟ್ಟಿದ್ದೆ.
ಆದರೆ ಸಂತ್ರಸ್ತೆಯ ಅಣ್ಣ, ಹಿರಿಯ ವಕೀಲರಾದ ಬಾಲನ್ ಅವರ ಮೂಲಕ, ಕೆಲವು ಹೋರಾಟಗಾರರ ನೆರವಿನೊಂದಿಗೆ ಪ್ರಕರಣವನ್ನು ಹೈಕೋರ್ಟ್ ಗೆ ದಾಖಲಿಸಿದ್ದು ಪತ್ರಿಕೆಗಳಿಂದ ತಿಳಿದು ಕೊಂಚ ಸಮಾಧಾನವಾಗಿತ್ತು. ಇದೆಲ್ಲ ತುರ್ತು ಕಾನೂನು ಪ್ರಕ್ರಿಯೆಯ ಫಲವಾಗಿ ಈಗ ಯಡಿಯೂರಪ್ಪನವರ ಬಂಧನಕ್ಕೆ ಜಾನೀನು ರಹಿತ ವಾರಂಟ್ ಜಾರಿಯಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಅನೇಕ ಬಗೆಯ ಕಾನೂನು ಉಲ್ಲಂಘನೆಯಾಗಿ ಹೋಗಿದೆ. ಇನ್ನಾದರೂ ತಡಮಾಡದೇ ಪೋಕ್ಸೋ ಆರೋಪಿ ಯಡಿಯೂರಪ್ಪ ಅವರನ್ನು ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಸರ್ಕಾರವು ಯಾವ ಪಿಳ್ಳೆ ನೆವಗಳನ್ನೂ ಹೇಳದೇ ಬಂಧಿಸಿ, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರ ಬರಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು.
ನಮ್ಮ ದೇಶ ಮತ್ತು ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಕೊಲೆ, ಹಿಂಸಾಚಾರಗಳು ಮಿತಿ ಮೀರಿ ಹೋಗಿದ್ದು, ಕಾನೂನು, ನೀತಿನಿಯಮಗಳು ಇಲ್ಲಿ ನಿಜಕ್ಕೂ ಜಾರಿಯಲ್ಲಿವೆಯೇ ಎಂದು ದಿಗ್ಭ್ರಮೆ ಪಡುವಷ್ಟರ ಮಟ್ಟಿಗೆ ಇಲ್ಲಿ ಪ್ರತಿ ಕ್ಷಣ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಪ್ರಕರಣ ದಾಖಲಾಗುವ ಪ್ರಮಾಣ, ಅದಕ್ಕೆ ನ್ಯಾಯ ದೊರಕುವ ಪ್ರಮಾಣ ಮಾತ್ರ ಇನ್ನೂ ಬೆರಳಿಕೆಯಷ್ಟು ಮಾತ್ರವಿದೆ. ಹೆಣ್ಣು ಸಂಕುಲದ ನಂಬಿಕೆಯನ್ನು ಎಲ್ಲ ಸರ್ಕಾರಗಳು ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಮಹಿಳಾ ಪರ ಎಂದು ಘೋಷಿಸಿಕೊಂಡಿರುವ ಕರ್ನಾಟಕ ಸರ್ಕಾರ ಈ ಪ್ರಕರಣದಲ್ಲಿ ತಕ್ಷಣವೇ ಅಸಹಾಯಕ ಹೆಣ್ಣುಮಗುವಿನ ಹಾಗೂ ನ್ಯಾಯದ ಪರವಾಗಿ ನಿಂತು ಪ್ರಭಾವಶಾಲಿ ಆರೋಪಿ ಯಡಿಯೂರಪ್ಪ ಅವರನ್ನು ಬಂಧಿಸಿ ತಕ್ಷಣವೇ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಈ ಮೂಲಕ ಹಕ್ಕೊತ್ತಾಯ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ ಪೋಕ್ಸೊ ಪ್ರಕರಣ | ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಆದೇಶ ಪ್ರಕಟ; ಯಾವುದೇ ಕ್ಷಣದಲ್ಲಿ ಬಿಎಸ್ವೈ ಬಂಧನ
ಇಂದು(ಏ.13) ಹೈಕೋರ್ಟ್ನಿಂದ ಬಂಧನ ವಾರಂಟ್ ಜಾರಿ
ಪ್ರಕರಣದ ನಡೆದಿರುವುದಕ್ಕೆ ಸಾಕ್ಷಿಯೆಂಬಂತೆ ದೂರುದಾರೆಯೊಂದಿಗೆ ಯಡಿಯೂರಪ್ಪ ಅವರು ಮಾತನಾಡಿರುವ ವಿಡಿಯೊ ತುಣುಕನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಏಪ್ರಿಲ್ 12ರಂದು ಪೊಲೀಸರು ಆರೋಪಿ ಯಡಿಯೂರಪ್ಪ ಅವರನ್ನು ಠಾಣೆಗೆ ಕರೆಸಿ ಧ್ವನಿ ಮಾದರಿ ಸಂಗ್ರಹಿಸಿದ್ದರು. ಫೊರೆನ್ಸಿಕ್ನಲ್ಲಿ ಅವರದ್ದೇ ಧ್ವನಿ ಎಂದು ದೃಢಪಟ್ಟಿದೆ ಎಂಬ ಮಾಹಿತಿಯಿದೆ. ಆದರೂ ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ. ಸಂತ್ರಸ್ತೆಯ ಕುಟುಂಬದವರು ಈ ಬಗ್ಗೆ ಹೈಕೋರ್ಟ್ ಮೊರೆ ಹೋದ ನಂತರ ಇಂದು (ಜೂ. 13) ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.
ಈಗಲಾದರೂ ಕುಂಟು ನೆಪ ಹೇಳದೇ ಆರೋಪಿಯನ್ನು ಬಂಧಿಸಿ ಈ ನೆಲದ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಸರ್ಕಾರ ಮಾಡಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ನೆಲದ ಕಾನೂನು ಉಳ್ಳವರ,ಬಲಾಢ್ಯರ ಕಾಲಿನ ಕಸವಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.ಇದು ಸಂಬಂಧಪಟ್ಟವರೆಲ್ಲರಿಗೂ ಲಜ್ಜೆಯಾಗದಿರುವದು ಓಜಿಗದ ಸಂಗತಿ.