ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೇಂದ್ರ ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಅರುಣ್ ಮತ್ತು ಇತರ ಇಬ್ಬರ ವಿರುದ್ಧ ತೃಪ್ತಿ ಹೆಗಡೆ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಅವರ ದೂರಿನ ವಿಚಾರಣೆ ನಡೆಸಿದ ನಗರದ 37ನೇ ಎಸಿಎಂಎಂ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿತ್ತು.
ಅದರನ್ವಯ ಅರುಣ್ ಸೋಮಣ್ಣ, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 506, 34, 504, 387, 420, 477A, 323, 327,347 ಹಾಗೂ 354 (ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ, ಅಪಹರಣ) ಅಡಿಯಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ತೃಪ್ತಿ ಹಾಗೂ ಮಧ್ವರಾಜ್ ಎಂಬುವರು ಸುಮಾರು 23 ವರ್ಷಗಳಿಂದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ. 2013ರಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ಇವರಿಗೆ ಅರುಣ್ ಸೋಮಣ್ಣ ಅವರ ಪರಿಚಯವಾಗಿತ್ತು.
ಬಳಿಕ, 2017ರಲ್ಲಿ ಅರುಣ್ ಸೋಮಣ್ಣ ಅವರ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜನೆ ಮಾಡುವ ಜವಾಬ್ದಾರಿಯನ್ನು ಮಧ್ವರಾಜ್ ಒಡೆತನದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೇ ನಿರ್ವಹಿಸಿತ್ತು.
ಆ ಬಳಿಕ ಅರುಣ್ ಸೋಮಣ್ಣ ಮತ್ತು ಮಧ್ವರಾಜ್ ಅವರ ಜತೆಗೆ ಉತ್ತಮ ಬಾಂಧವ್ಯ ಇತ್ತು. ಹೀಗಾಗಿ, 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ನೈಬರ್ ಹುಡ್ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಪಾರ್ಟನರ್ ಶಿಪ್ ಡೀಡ್ ಮೇಲೆ ಆರಂಭಿಸಿದ್ದರು. ಕಂಪನಿಯ ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿ ಅರುಣ್ ವಹಿಸಿಕೊಂಡಿದ್ದರು.
ಕೆಲ ತಿಂಗಳಲ್ಲಿ ಕಂಪನಿಯ ವ್ಯವಹಾರದಲ್ಲಿ ನಷ್ಟವಾಗಿತ್ತು. ಈ ಹಿನ್ನೆಲೆ ಮಧ್ವರಾಜ್‌ಗೆ ಕಂಪನಿಗೆ ರಾಜೀನಾಮೆಗೆ ಒತ್ತಾಯಿಸಿ ಕಿರುಕುಳ, ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಸುರಂಗ ಕೊರೆಯುವ ಟಿಬಿಎಂ ಯಂತ್ರಗಳಿಗೆ ಅಡ್ಡ ಬಂದ ಬಂಡೆ; ಪಿಂಕ್ ಲೈನ್ ಕಾಮಗಾರಿ ವಿಳಂಬ
ಕಂಪನಿಯಲ್ಲಿ ಲಾಸ್ ಆಗಿದ್ದ ಹಣವನ್ನು ನೀಡುವಂತೆ ಬೆದರಿಸಿ, ಹಲ್ಲೆ ಮಾಡಿಸಿ ಮಧ್ವರಾಜ್ ದಂಪತಿಯಿಂದ ವಸೂಲಿ ಮಾಡಿರುವ ಆರೋಪವೂ ಇದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಂಜಯ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿತರ ವಿರುದ್ಧ ಜಾಮೀನು ರಹಿತ ಸೆಕ್ಷನ್ಗಳಿರುವುದರಿಂದ ಸಚಿವ ಸೋಮಣ್ಣ ಅವರ ಪುತ್ರನಿಗೆ ಬಂಧನದ ಭೀತಿ ಎದುರಾಗಿದೆ.