ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಮನೆಗಳ ಬೀಗ ಮುರಿದು ಹಾಡಹಗಲೇ ಕಳ್ಳತನ ಮಾಡುತ್ತಿದ್ದ ಖದೀಮರನ್ನು ನಗರದ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಅಬುದ್ ಅಲಿ, ಶೇಕ್ ಫಯಾಜ್, ಅಯೈದ್ ಅಹ್ಮದ್, ರಿಯಾಜ್ ಸೇರಿದಂತೆ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಮೂಲತಃ ಹೈದರಾಬಾದ್‌ನವರಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂಧಿತರು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದ 7ನೇ ಕ್ರಾಸ್ ಮನೆಯೊಂದರ ಬಾಗಿಲು ಮುರಿದು ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು.
ಕಳ್ಳತನ ಮಾಡಿ ಆರೋಪಿಗಳು ಒಂದೂವರೆ ಕಿ.ಮೀ ವರೆಗೂ ನಡೆದು, ಮುಂದೆ ಹೋಗಿ ಕಾರು ಹತ್ತಿದ್ದರು. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರ ಪತ್ತೆಗೆ ಬಲೆ ಬೀಸಿದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಖದೀಮರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಈ ಐವರು ಖದೀಮರು ಹೈದರಾಬಾದ್‌ನಿಂದ ಕಳುವು ಮಾಡಲೆಂದೇ ಬೆಂಗಳೂರಿಗೆ ಹೊಸ ಕ್ರೇಟಾ ಕಾರ್‌ನಲ್ಲಿ ಬರುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಹೊರವಲಯದಲ್ಲಿ 20 ಹೊಸ ಉದ್ಯಾನವನಗಳ ಅಭಿವೃದ್ಧಿಗೆ ಬಿಬಿಎಂಪಿ ಯೋಜನೆ
ಬಂಧಿತ ಆರೋಪಿಗಳ ಪೈಕಿ ಅಯೈದ್ ಅಹ್ಮದ್ ಎಂಬಿಎ ಪದವೀಧರನಾಗಿದ್ದಾನೆ. ಅಲ್ಲದೇ, ಈತನ ಮೇಲೆ ನೂರಾರು ಕೇಸ್‌ಗಳು ದಾಖಲಾಗಿವೆ. ಅಬುದ್ ಅಲಿ ಮೇಲೆ 50ಕ್ಕೂ ಹೆಚ್ಚು ಮನೆಗಳ್ಳತನ ಕೇಸ್ ದಾಖಲಾಗಿವೆ.