ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಡಿಪೋ ವ್ಯವಸ್ಥಾಪಕ ಹಾಗೂ ಭದ್ರತಾ ಸಿಬ್ಬಂದಿ ಟಿಕೆಟ್ ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಸದ್ಯ ಪ್ರಯಾಣಿಕ ನೀಡಿದ ದೂರಿನ ಮೇರೆಗೆ ಕೆಎಸ್‌ಆರ್‌ಟಿಸಿ ಟರ್ಮಿನಲ್ 2 ಡಿಪೋ ವ್ಯವಸ್ಥಾಪಕ ಮತ್ತು ಭದ್ರತಾ ಸಿಬ್ಬಂದಿ ಸತೀಶ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜಿ. ರಾಘವೇಂದ್ರ ಪ್ರಯಾಣಿಕ. ಇವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ವ್ಯಾಪಾರಿ. ಡಿಸೆಂಬರ್ 23ರಂದು ರಾತ್ರಿ 12:15ರ ಸುಮಾರಿಗೆ ಬೆಂಗಳೂರಿನಿಂದ ಹಿರಿಯೂರಿಗೆ ಪ್ರಯಾಣ ಬೆಳೆಸಿದ್ದರು. ಕೆಎಸ್‌ಆರ್‌ಟಿಸಿ 1 ನೇ ಟರ್ಮಿನಲ್‌ನಿಂದ ಹರಿಹರದ ಮಾರ್ಗದ ಬಸ್ ಹತ್ತಿದ್ದರು.
ಬಸ್ ಹತ್ತಿದ ಬಳಿಕ ಹಿರಿಯೂರ್‌ಗೆ ಟಿಕೆಟ್ ನೀಡುವಂತೆ ನಿರ್ವಾಹಕರಿಗೆ ಕೇಳಿದ್ದರು. ಆದರೆ, ನಿರ್ವಾಹಕ ಹಿರಿಯೂರ್‌ಗೆ ಬಸ್ ತೆರಳುವುದಿಲ್ಲ ಎನ್‌ಎಚ್ ಮೂಲಕ ಹಾದು ಹೋಗುತ್ತದೆ. ಬೈಪಾಸ್ ಬಳಿ ನಿಲ್ಲಿಸುವುದಾಗಿ ತಿಳಿಸುತ್ತಾರೆ.
ಇದಕ್ಕೆ ಪ್ರಯಾಣಿಕ ಹಿರಿಯೂರ್ ಬೈಪಾಸ್ ಬಳಿ ಇಳಿದುಕೊಳ್ಳುವೆ ಎಂದು ಹೇಳಿದ್ದಾರೆ. ಇದಕ್ಕೆ ನಿರ್ವಾಹಕ ಚಿತ್ರದುರ್ಗಕ್ಕೆ ಟಿಕೆಟ್ ಪಡೆದರೇ, ಬೈಪಾಸ್ ಬಳಿ ನಿಲ್ಲಿಸುವುದಾಗಿ ತಿಳಿಸುತ್ತಾರೆ. ಇದಕ್ಕೆ ಪ್ರಶ್ನಿಸಿದ ಪ್ರಯಾಣಿಕನನ್ನು ನಿರ್ವಾಹಕ ಬಸ್‌ನಿಂದ ಇಳಿಸುತ್ತಾನೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಯೋಚಿಸಿದ ಪ್ರಯಾಣಿಕ ತಕ್ಷಣ ಡಿಪೋ ಮ್ಯಾನೇಜರ್ ಬಳಿ ತೆರಳಿ ಆದ ಘಟನೆ ಬಗ್ಗೆ ಹೇಳಿದ್ದಾರೆ ಮತ್ತು ಟಿಕೆಟ್ ವಿಚಾರವನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಡಿಪೋ ಮ್ಯಾನೇಜರ್ ಕೂಡ ‘ಹರಿಹರ ಅಥವಾ ಚಿತ್ರದುರ್ಗಕ್ಕೆ ಮಾತ್ರ ಟಿಕೆಟ್ ಪಡೆಯಬೇಕು’ ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರ್ತವ್ಯ ನಿರತ ಸಂಚಾರ ಪೊಲೀಸ್ ಮೇಲೆ ಹಲ್ಲೆ: ಬಂಧನ
ಈತನ ಹೇಳಿಕೆಯನ್ನು ರಾಘವೇಂದ್ರ ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾದಾಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಮ್ಯಾನೇಜರ್ ಇಬ್ಬರು ಅವರಿಗೆ ಲಾಠಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಅಲ್ಲದೇ, ಮೊಬೈಲ್ ಕಿತ್ತುಕೊಂಡು ಕಾಲಿನಿಂದ ಎದೆಗೆ ಒದ್ದು ಎಳೆದಾಡಿದ್ದಾರೆ. ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಯಾಣಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಘವೇಂದ್ರ ನೀಡಿರುವ ದೂರಿನ ಅನ್ವಯ ಡಿಪೋ ಮ್ಯಾನೇಜರ್ ಹಾಗೂ ಭದ್ರತಾ ಸಿಬ್ಬಂದಿ ಸತೀಶ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.