ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಚಂದಾದಾರಿಕೆ ಆಸೆಗೆ ಬಿದ್ದು, ವ್ಯಕ್ತಿಯೊಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿ ₹1 ಲಕ್ಷ ಕಳೆದುಕೊಂಡಿದ್ದಾರೆ. ವಂಚಕರು ತಮಗೆ ಮಲ್ಟಿಪ್ಲೆಕ್ಸ್‌ನಲ್ಲಿ ಗೋಲ್ಡ್ ಕಾರ್ಡ್ ಲಭ್ಯವಿದೆ. ನಿಮ್ಮ ವಿಳಾಸವನ್ನು ಪರಿಶೀಲಿಸಲು ತಮ್ಮ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ಹಾಗೂ ಒಟಿಪಿ ನೀಡಬೇಕೆಂದು ಹೇಳಿ, ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ₹1,18,000 ವಂಚಿಸಿದ್ದಾರೆ.
ನಾಗರಭಾವಿಯಲ್ಲಿ ಗಾರ್ಮೆಂಟ್ ವ್ಯಾಪಾರ ನಡೆಸುತ್ತಿರುವ ಚಂದ್ರಾ ಲೇಔಟ್ ನಿವಾಸಿ ಚಂದ್ರು (ಹೆಸರು ಬದಲಿಸಲಾಗಿದೆ) ಅಕ್ಟೋಬರ್ 14 ರಂದು ಮೈಸೂರು ರಸ್ತೆಯ ಮಾಲ್‌ಗೆ ಸಿನಿಮಾ ನೋಡಲು ಹೋಗಿದ್ದರು. ಅಲ್ಲಿ ವಾರಾಂತ್ಯದಲ್ಲಿ ವಿಶೇಷವಾಗಿ ಕಾಂಪ್ಲಿಮೆಂಟರಿ ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಅನ್ನು ಅವರಿಗೆ ನೀಡಲಾಗಿದೆ. ಆಫರ್‌ನಿಂದ ಆಕರ್ಷಿತರಾದ ಅವರು ತಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ನೀಡಲು ಸಮ್ಮತಿಸಿದ್ದು, ಒಟಿಪಿಯನ್ನೂ ಹಂಚಿಕೊಂಡಿದ್ದಾರೆ.
“ಅಕ್ಟೋಬರ್ 15 ರಂದು, ನಾನು ಆನ್‌ಲೈನ್ ಬ್ಯಾಂಕ್ ಪೋರ್ಟಲ್ ಅನ್ನು ಪರಿಶೀಲಿಸಿದಾಗ, ನನ್ನ ಬ್ಯಾಂಕ್ ಬ್ಯಾಲೆನ್ಸ್ ₹1,18,200 ನಿಂದ ₹200 ಕಡಿತವಾಗಿತ್ತು. ಆದರೆ ಬ್ಯಾಂಕ್‌ನಿಂದ ಯಾವುದೇ ಡೆಬಿಟ್ ಸಂದೇಶ ನನಗೆ ಬಂದಿಲ್ಲ. ನನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದಾಗ, ನಾನು ಒಟಿಪಿ ಹಂಚಿಕೊಂಡಿದ್ದರಿಂದ ಹಣ ಕಡಿತವಾಗಿದೆ ಎಂದು ತಿಳಿಸಿದರು. ನನ್ನ ಖಾತೆಯಿಂದ ನಾಲ್ಕು ಬಾರಿ ಹಣ ಕಡಿತವಾಗಿದ್ದು, (₹99,999, ₹1, ₹15,000 ಮತ್ತು ₹3,000) ಒಟ್ಟು ₹1,18,000 ವರ್ಗಾವಣೆಯಾಗಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ” ಎಂದು ಚಂದ್ರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದ ಸಂಘಟನೆಗಳು
“ತಮ್ಮ ಅಧಿಕೃತ ದಾಖಲೆಗಳಿಗೆ ಲಿಂಕ್ ಮಾಡಿದ ಯಾವುದೇ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಅಂತಹ ಯಾವುದೇ ರುಜುವಾತುಗಳನ್ನು ನಾವು ವಿನಂತಿಸುವುದಿಲ್ಲ ಎಂದು ಮಲ್ಟಿಪ್ಲೆಕ್ಸ್ ನಮಗೆ ತಿಳಿಸಿದೆ. ಸಂತ್ರಸ್ತ ವ್ಯಕ್ತಿಯು ಮಲ್ಟಿಪ್ಲೆಕ್ಸ್‌ನಿಂದ ವಂಚನೆಗೆ ಒಳಗಾಗಿದ್ದರೆ ಅಥವಾ ಆತನ ಪ್ರಕರಣವು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗೆ (AEPS) ಸಂಬಂಧಿಸಿದ್ದೇ ಎಂಬುದನ್ನು ನಾವು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಐಟಿ ಕಾಯ್ದೆಯಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.