ಬೆಂಗಳೂರು | 808 ನಕಲಿ ಖಾತೆ ಮಾಡಿ ಪಾಲಿಕೆಗೆ ₹20 ಕೋಟಿ ವಂಚನೆ: ಎನ್‌ ಆರ್‌ ರಮೇಶ್ ಆರೋಪ

Date:

Advertisements

“ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ 808 ನಕಲಿ ಖಾತೆಗಳನ್ನು ಮಾಡುವ ಮೂಲಕ ಪಾಲಿಕೆಗೆ ₹20 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರುವ ಬೃಹತ್ ಹಗರಣದ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಎನ್. ಆರ್ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, “ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 160 (ರಾಜರಾಜೇಶ್ವರಿನಗರ ವಾರ್ಡ್) ವ್ಯಾಪ್ತಿಯ ಚನ್ನಸಂದ್ರ, ಹಲಗೆವಡೇರಹಳ್ಳಿ ಹಾಗೂ ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 808 ನಕಲಿ ಖಾತೆಗಳನ್ನು ಸೃಷ್ಟಿಸಿ ಪಾಲಿಕೆಗೆ ₹20 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಬೃಹತ್ ಹಗರಣ ನಡೆದಿದೆ” ಎಂದು ಹೇಳಿದ್ದಾರೆ.

“ಈ ಕಚೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಹಾಗೂ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಓಂಕಾರಮೂರ್ತಿ ಎಂಬುವವರು ಸೇರಿಕೊಂಡು ವಾರ್ಡ್ ನಂಬರ್ 160ಕ್ಕೆ ಸಂಬಂಧಿಸಿದ `ಎ’ ವಹಿ (‘A’ Register) ಯಲ್ಲಿ ಫೇಕ್ ಎಂಟ್ರಿಗಳನ್ನು ಮಾಡುವ ಮೂಲಕ 808 ಸ್ವತ್ತುಗಳಿಗೆ ನಕಲಿ ಖಾತೆ ಸೃಷ್ಟಿಸಿದ್ದಾರೆ. ಇವರುಗಳ ಪೈಕಿ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತನ ಪಾತ್ರವೇ ಎಲ್ಲರಿಗಿಂತಲೂ ಬಹಳ ದೊಡ್ಡದಾಗಿದೆ” ಎಂದಿದ್ದಾರೆ.

Advertisements

“808 ಸ್ವತ್ತುಗಳಿಗೆ ಕಾನೂನು ರೀತ್ಯಾ ಅಭಿವೃದ್ಧಿ ಶುಲ್ಕಗಳನ್ನು ಪಾವತಿಸಿಕೊಂಡು `ಎ’ ಖಾತಾಗಳನ್ನು ಮಾಡಿದ್ದೇ ಆದಲ್ಲಿ, ಅಭಿವೃದ್ಧಿ ಶುಲ್ಕದ ರೂಪದಲ್ಲಿ ಪಾಲಿಕೆಗೆ ₹20 ಕೋಟಿಗೂ ಹೆಚ್ಚು ಹಣ ಸಂದಾಯವಾಗುತ್ತಿತ್ತು. ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿ / ನೌಕರರಿಗಿಂತಲೂ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

“ಪಾಲಿಕೆಗೆ ಸಂಬಂಧವೇ ಇಲ್ಲದ ಯಶವಂತ್ ಕುಮಾರ್, ವಿಜಯ್ ಕುಮಾರ್ ಮತ್ತು ಮುತ್ತುರಾಜ್ ಎಂಬ ಮಧ್ಯವರ್ತಿಗಳು ಕಚೇರಿಯ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರ ಆಸನಗಳಲ್ಲಿ ಕುಳಿತು ಪಾಲಿಕೆಯ ದಾಖಲೆಗಳಲ್ಲಿ ತಮಗಿಷ್ಟ ಬಂದ ಎಂಟ್ರಿಗಳನ್ನು ಮಾಡುವ ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಿದ್ದಾರೆ” ಎಂದಿದ್ದಾರೆ.

“ಈ ಮೂವರಿಗೆ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದು, ಇವರುಗಳು ಹೇಳಿದಂತೆ ಕಂದಾಯ ಪರಿವೀಕ್ಷಕ ಗಣೇಶ್ ಮತ್ತು ಸಹಾಯಕ ಕಂದಾಯ ಅಧಿಕಾರಿಯಾದ ಅರುಣ್ ಕುಮಾರ್ ಅವರು ಚಾಚೂ ತಪ್ಪದೇ ಪಾಲಿಸುತ್ತಾ ಅವರು ಮಾಡಿಕೊಟ್ಟ ನಕಲಿ ದಾಖಲೆಗಳಿಗೆ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 808 ನಕಲಿ ಖಾತೆ ಮಾಡಿ ಪಾಲಿಕೆಗೆ ₹20 ಕೋಟಿ ವಂಚನೆ: ಎನ್‌ ಆರ್‌ ರಮೇಶ್ ಆರೋಪ

“ಇವರೊಂದಿಗೆ ಈಗಾಗಲೇ 2022ರಲ್ಲಿ ಕಂದಾಯ ವಸೂಲಿಗಾರರಾಗಿ ನಿವೃತ್ತರಾಗಿರುವ ಸಿದ್ದನಾಯಕ್ ಎಂಬಾತ ನಿವೃತ್ತರಾಗಿ ಒಂದೂವರೆ ವರ್ಷಗಳು ಕಳೆದರೂ ಸಹ ಪ್ರತಿನಿತ್ಯ ಕಚೇರಿಗೆ ಹಾಜರಾಗಿ ಕಚೇರಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಮತ್ತು ಎಂಟ್ರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಎಂಬ ಮತ್ತೊಬ್ಬ ವಂಚಕ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಸಹ ಸದರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಕಾರ್ಯವನ್ನು ಮಾಡುತ್ತಾ ಹತ್ತಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾಡಿದ್ದಾನೆ” ಎಂದು ಆರೋಪಿಸಿದ್ದಾರೆ.

“ಈ ಯಶವಂತ್ ಕುಮಾರ್, ವಿಜಯ್ ಕುಮಾರ್ ಹಾಗೂ ಮುತ್ತುರಾಜ್ ಅವರುಗಳ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರ ಆಪ್ತ ಸಹಾಯಕನಾಗಿರುವ ಗುರುಶಾಂತಪ್ಪ ಎಂಬ ಮತ್ತೊಬ್ಬ ವಂಚಕ ಎಲ್ಲ ರೀತಿಯ ಸಹಾಯ ಮಾಡುತ್ತಿರುತ್ತಾನೆ. ಗುರುಶಾಂತಪ್ಪ ಸಿಎಂಸಿ ಅವಧಿ (2006-07) ಯಿಂದಲೂ ಇದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಸಹ ಈತನನ್ನು ಬೇರೆಡೆಗೆ ವರ್ಗಾವಣೆಗೊಳಿಸಲು ಇದುವರೆವಿಗೂ ಯಾವುದೇ ಅಧಿಕಾರಿಗೆ ಸಾಧ್ಯವಾಗಿಲ್ಲ. ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್ ರವರು ಈ ಎಲ್ಲಾ ವಂಚಕ ಅಧಿಕಾರಿಗಳು / ನೌಕರರು ಮತ್ತು ಮಧ್ಯವರ್ತಿಗಳ ಕಾನೂನು ಬಾಹಿರ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಈ ಬೃಹತ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಮೇಲೆ ತಿಳಿಸಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ದಾಖಲೆಗಳೊಂದಿಗೆ ಲಗತ್ತಿಸಿರುವ ಎಲ್ಲ 808 ಸ್ವತ್ತುಗಳಿಗೆ ಸಂಬಂಧಿಸಿದ ನಕಲಿ `ಎ’ ಖಾತಾಗಳನ್ನು ಕೂಡಲೇ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.

“ಮಧ್ಯವರ್ತಿಗಳನ್ನು ಕಚೇರಿಯಲ್ಲಿ ಸರ್ಕಾರಿ ನೌಕರರು ಕುಳಿತುಕೊಳ್ಳುವ ಜಾಗದಲ್ಲಿ ಕೂರಲು ವ್ಯವಸ್ಥೆ ಮಾಡಿಕೊಟ್ಟಿರುವ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಸಹಾಯಕ ಮತ್ತು ಈ ಬೃಹತ್ ಹಗರಣದಲ್ಲಿ ಶಾಮೀಲಾಗಿರುವ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕ ಗಣೇಶ್ ಹಾಗೂ ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್ ರವರನ್ನು ಕೂಡಲೇ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಬೇಕು” ಎಂದು ಪಾಲಿಕೆಯ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ವಿಶೇಷ ಆಯುಕ್ತರು (ಕಂದಾಯ) ಮತ್ತು ರಾಜರಾಜೇಶ್ವರಿನಗರ ವಲಯದ ಆಯುಕ್ತರಿಗೆ ಮನವಿ ಮಾಡಿದ್ದಾರೆ.

“ಹಾಗೆಯೇ, ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕ ಗಣೇಶ್, ಪ್ರಥಮ ದರ್ಜೆ ಗುಮಾಸ್ತರಾದ ಓಂಕಾರಮೂರ್ತಿ, ವಾಟರ್ ಮ್ಯಾನ್ ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಮತ್ತು ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್ ರವರುಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಾಯುಕ್ತದಲ್ಲಿ ದೂರು ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

Download Eedina App Android / iOS

X