ಸ್ನೇಹಿತರ ಜಗಳದ ಮಧ್ಯೆ ಹೋದ ವ್ಯಕ್ತಿಯೊಬ್ಬನ ಕೊಲೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಹಾಗೂ ದರ್ಶನ್ ಕೊಲೆ ಮಾಡಿದ ಆರೋಪಿಗಳು. ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ದರ್ಶನ್ಗೆ ಆತನ ದೊಡ್ಡಮ್ಮ ₹3000 ಹಣ ನೀಡಿ, ಆತನ ತಾಯಿಗೆ ನೀಡಲು ಹೇಳಿರುತ್ತಾರೆ. ಆದರೆ, ದರ್ಶನ್ ಅದೇ ದುಡ್ಡು ತೆಗೆದುಕೊಂಡು ಜನವರಿ 24ರಂದು ಬಾರ್ಗೆ ತನ್ನ ಸ್ನೇಹಿತರಾದ ನಿತಿನ್ ಮತ್ತು ರಮೇಶ್ ಜತೆಗೆ ತೆರಳಿದ್ದಾನೆ.
ಇದೇ ಸಮಯದಲ್ಲಿ ಬಾರ್ಗೆ ಆತನ ಇನ್ನು ಕೆಲವು ಸ್ನೇಹಿತರಾದ ಸದ್ಯ ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಬಂದಿದ್ದಾರೆ. ಈ ನಡುವೆ ದರ್ಶನ್ ಸ್ನೇಹಿತ ನಿತಿನ್ ಹಾಗೂ ಪ್ರೀತಂ ನಡುವೆ ಜಗಳ ಆರಂಭವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೌಡಿಶೀಟರ್ ಹತ್ಯೆ ಪ್ರಕರಣ; ನಾಲ್ವರ ಬಂಧನ
ಈ ಘಟನೆ ಬಳಿಕ ದರ್ಶನ ಮತ್ತು ಆತನ ಸಂಗಡಿಗರು ರಮೇಶ್ ಮನೆಗೆ ತೆರಳುತ್ತಾರೆ. ಇದೇ, ಸಮಯಕ್ಕೆ ಆರೋಪಿಗಳು ಆತನ ಮನೆ ಬಳಿ ಬರುತ್ತಾರೆ. ಆಗ ನಿತಿನ್ ಮತ್ತು ಪ್ರೀತಂ ನಡುವೆ ಗಲಾಟೆ ಆಗಿ, ಪ್ರೀತಂ ನಿತಿನ್ಗೆ ಹೊಡೆದಿದ್ದಾನೆ. ಈ ವೇಳೆ, ಮಧ್ಯಪ್ರವೇಶಿಸಿದ ದರ್ಶನ್ಗೆ ಪ್ರೀತಂ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾನೆ. ಈ ವೇಳೆ, ದರ್ಶನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.